ಬಾಗಲಕೋಟೆ: ಕಮ್ಮಾರ, ಬಡಿಗ, ಕಂಚುಗಾರ, ಶಿಲ್ಪಿ, ಅಕ್ಕಸಾಲಿ ವೃತ್ತಿಗಳು ಜ್ಞಾನದ ಕೌಶಲ ಹೊಂದಿವೆ. ವಿಶ್ವಕರ್ಮರು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಹರಿಕಾರರಾಗಿದ್ದಾರೆ ಎಂದು ಮುರನಾಳದ ಮಳೆರಾಜೇಂದ್ರಸ್ವಾಮಿ ಮಠದ ನವೀನ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುರನಾಳ ಪುನರ್‌ವಸತಿ ಕೇಂದ್ರದಲ್ಲಿ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಪೂಜಾ ಮಹೋತ್ವವ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಜ್ಞಾನವೆಂದರೆ ಭೌತಿಕ ತಿಳಿವಳಿಕೆಯನ್ನು ಸಾಮಾಜಿಕ ವಿವೇಕವನ್ನಾಗಿ ಪರಿವರ್ತಿಸುವುದಾಗಿದೆ ಎಂದರು.
ಜಗತ್ತಿನ ಚೇತನ, ಅಚೇತನಗಳಲ್ಲಿ ಅಸಾಧಾರಣ ಚೈತನ್ಯ ತುಂಬಿ ಮಾನವ ಕುಲದ ಸೌಂದರ್ಯ ಹಾಗೂ ಸ್ಪಾಸ್ಥ್ಯ ಬದುಕಿಗೆ ಕಾರಣವಾಗುತ್ತ ಬಂದವರೇ ವಿಶ್ವಕರ್ಮರಾಗಿದ್ದಾರೆ ಎಂದು ಹೇಳಿದರು.
ಮೌನೇಶ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮನು ತನ್ನ ಸಂಕಲ್ಪ ಮಾತ್ರದಿಂದಲೇ ಸಕಲವನ್ನು ಸೃಷ್ಟಿಸಿದವನು ಎಂದರು.
ಸಾಹಿತಿ ಚಂದ್ರಶೇಖರ ಕಾಳನ್ನವರ ಮಾತನಾಡಿ, ಶಿಲ್ಪಗಳು, ಅರಮನೆ, ಕೋಟೆಗಳು ಶಿಲ್ಪಿಯ ವೈಯಕ್ತಿಕ ಕಲೆ ಪ್ರದರ್ಶನದ ಜೊತೆಗೆ ಒಂದು ಜನಾಂಗದ, ಒಂದು ಕಾಲ ಧರ್ಮದ, ಒಂದು ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಹೇಳಿದರು.
ಸಮಾಜದ ಹಿರಿಯ ಶಂಕ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಹುಚ್ಚಪ್ಪ ಶಿರೂರ, ರಾಮಣ್ಣ ಗಣಿ, ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಅಶೋಕ ಪತ್ತಾರ, ಚಂದ್ರಶೇಖರ ಪತ್ತಾರ, ರುಕ್ಮಣ್ಣ ಪತ್ತಾರ, ಗಂಗಾಧರ ಬಡಿಗೇರ, ನಾರಾಯಣ ಬಡಿಗೇರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.