ಬಾಗಲಕೋಟೆ: ನಗರಕ್ಕೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅನುದಾನ ತಂದವರಿಗೆ ಮತ ನೀಡಲಾಗುವುದು ಎಂಬ ಅಭಿಯಾನವನ್ನು ಕರ್ನಾಟಕ ನವನಿರ್ಮಾಣ ಸೇನೆ ಮುಖಂಡರು ಆರಂಭಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆ ಅನುದಾನ ನೀಡುವುದಾಗಿ ಘೋಷಿಸಿದ್ದ ಸಿದ್ದರಾಮಯ್ಯ ಅವರು, ಬಜೆಟ್‌ನಲ್ಲಿ ಅನುದಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನವೇ ಅತ್ಯಂತ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ಅನುದಾನ ತಂದವರಿಗೆ ಮತ ನೀಡಲಾಗುವುದು. ಅವಶ್ಯಕತೆ ಬಿದ್ದರೆ ಬಹಿಷ್ಕಾರಕ್ಕೂ ಮುಂದಾಗಲಾಗುವುದು. ಈ ಬಗ್ಗೆ ಮನೆ, ಮನೆಗೆ ತೆರಳಿ ಜನರಿಗೆ ತಿಳಿಸಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾಲೇಜು ನಿರ್ಮಾಣಕ್ಕೆ ಬೇಕಾಗಿರುವ ₹610 ಕೋಟಿ ಬಿಡುಗಡೆ ಮಾಡುವ ಮೂಲಕ ಬಡಜನರಿಗೆ ಚಿಕಿತ್ಸೆ ಪಡೆಯಲು ನೆರವಾಗಬೇಕು ಎಂದು ಆಗ್ರಹಿಸಿದರು.
ಸಮಾಜವಾದದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದ ಯಶಸ್ಸು ಕಾಣಬೇಕಾದರೆ, ಸಾಮಾಜಿಕವಾಗಿ ಹಿಂದುಳಿದ, ನಿರ್ಲಕ್ಷಕ್ಕೆ ಒಳಗಾಗಿರುವ ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ನಿಡಿದಾಗ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಆತ್ಮಾರಾಮ ನೀಲನಾಯಕ, ವಕೀಲ ರಮೇಶ ಬದ್ನೂರ, ಎನ್.ಎ. ಟಂಕಸಾಲಿ, ರಶೀದ್, ಜಾಫರ್ ಕೊರಟಿ, ಬಿ.ಎಸ್. ಬಾವಾಖಾನ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.