ಬೀಳಗಿ: ‘ತೆಗ್ಗಿ ಏತ ನೀರಾವರಿ ಕಾಲುವೆಗೆ ಇಂದಿನಿಂದ ಅಕ್ಟೋಬರ್ ಕೊನೆಯ ದಿನದವರೆಗೆ ನಿರಂತರವಾಗಿ ನೀರು ಹರಿಸಬೇಕು’ ಎಂದು ಅಧಿಕಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ ಸೂಚಿಸಿದರು.
ತಾಲ್ಲೂಕಿನ ತೆಗ್ಗಿ ಸಿದ್ದಾಪೂರ ಏತ ನೀರಾವರಿ ಯೋಜನೆಯ ಕೃಷ್ಣಾ ಭಾಗ್ಯ ಜಲ ನಿಗಮದ 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರವಾಸಿ ಸ್ಥಳವಾಗಿರುವ ಚಿಕ್ಕಸಂಗಮದ ಬಳಿ ₹24 ಕೋಟಿ ಹಣದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುವುದು. ಈಗಾಗಲೇ ಇದರ ಆದೇಶವಾಗಿದ್ದು, ನಾಲ್ಕು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು’ ಎಂದು ತಿಳಿಸಿದರು.
‘ತಾಲ್ಲೂಕಿನ ಸುನಗ ಗ್ರಾಮದಲ್ಲಿ ತೆಗೆದುಕೊಂಡಿರುವ 8 ಎಕರೆ ಪ್ರದೇಶದಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಗುಣಮಟ್ಟದ ವಸತಿ ಶಾಲೆಯು ₹34.45 ಕೋಟಿ ಹಣದಲ್ಲಿ ನಿರ್ಮಾಣವಾಗಲಿದ್ದು, ಕ್ಯಾಬಿನೆಟ್‌ನಲ್ಲಿ ಮಂಜೂರಾತಿ ದೊರೆತಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.
ಬಳಿಕ ತೆಗ್ಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯ ದುರ್ಗಾದೇವಿ ದೇವಸ್ಥಾನದಿಂದ ಕೆರೆಯವರೆಗೆ ₹6 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಚಾಲನೆ ನೀಡಿದರು.
ಕೃಷ್ಣಾ ಜಲ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ವಿ.ಎಲ್. ಶೇಗುಣಸಿ, ಎಇಇ ಅಮರೇಶ ಬಿರಾದಾರ, ಎಇ ಅನೀಲ ರಾಠೋಡ, ಮುಖಂಡರಾದ ಎಂ. ಎಸ್. ಕಾಳಗಿ, ದೊಡ್ಡಣ್ಣ ದೇಸಾಯಿ, ಗೋವಿಂದಪ್ಪ ಜಕರಡ್ಡಿ, ಶ್ರೀಶೈಲ ಅಂಟೀನ, ಶಿವಾನಂದ ಮಾದರ, ಹನಮಂತ ಸಿಂಗರಡ್ಡಿ, ಹನಮಂತ ಕಟ್ಟೆಪ್ಪನವರ, ಸೋಮು ಸಂಶಿ, ರಮೇಶ ನಾಯ್ಕರ, ಸಿದ್ದು ಸಂಕಣ್ಣವರ, ಚಂದ್ರಶೇಖರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.