ಬಾಗಲಕೋಟೆ: ಬಿಳಿಜೋಳ ಬೆಲೆ ಕುಸಿತ ಕಂಡಿದೆ. ಬೆಂಬಲ ಬೆಲೆಯಡಿ ಬಿಳಿಜೋಳ ಖರೀದಿಸಿ ರೈತರ ನೆರವಿಗೆ ಬರಬೇಕಾಗಿದ್ದ ಸರ್ಕಾರ ಖರೀದಿಗೆ ಆದೇಶ ಹೊರಡಿಸಿದೆ. ಖರೀದಿ ಮಾಡುವಂತೆ ಸರ್ಕಾರ ಸೂಚಿಸಿದ್ದರೂ, ಜಿಲ್ಲೆಯಲ್ಲಿ ಖರೀದಿಯೂ ಆರಂಭವಾಗಿಲ್ಲ. ನೋಂದಣಿಯೂ ನಡೆಯುತ್ತಿಲ್ಲ.
ವಾಣಿಜ್ಯ ಬೆಳೆಯತ್ತ ಹೊರಳಿರುವ ರೈತರು ಬಿಳಿಜೋಳ ಬಿತ್ತನೆ ಕಡಿಮೆ ಮಾಡಿದ್ದಾರೆ. ಬೆಲೆ ಕುಸಿದಾಗ ಸರ್ಕಾರ ನೆರವಿಗೆ ಬಾರದಿದ್ದರೆ, ಮುಂದಿನ ದಿನಗಳಲ್ಲಿ ಬೆಳೆಯ ಪ್ರಮಾಣ ಮತ್ತಷ್ಟು ಕುಸಿಯಲಿದೆ. ಜಿಲ್ಲೆಯಲ್ಲಿ ಮೊದಲು 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಈಗ ಅದರ ಪ್ರಮಾಣ 95 ಸಾವಿರ ಹೆಕ್ಟೇರ್‌ಗೆ ಕುಸಿದಿದೆ. 35 ಸಾವಿರ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ.
ಬೆಂಬಲ ಬೆಲೆಯಡಿ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ₹3,421, ಹೈಬ್ರಿಡ್ ಜೋಳ ಪ್ರತಿ ಕ್ವಿಂಟಲ್‌ಗೆ ₹3,371 ನಿಗದಿ ಮಾಡಲಾಗಿದೆ. ರಾಜ್ಯದ ರೈತರಿಂದ ಕೇಂದ್ರವು 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸಲು ಉದ್ದೇಶಿಸಿದೆ. ರಾಜ್ಯ ಸರ್ಕಾರವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ನೋಡಲ್ ಏಜೆನ್ಸಿಯಾಗಿದೆ ನೇಮಿಸಿದೆ. ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಖರೀದಿಯ ನಿಗದಿತ ಗುರಿ ಸಾಧನೆ ಕಷ್ಟ ಎನಿಸುತ್ತಿದೆ.
ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಒಂದರಂತೆ ಖರೀದಿ ಕೇಂದ್ರಗಳನ್ನು ತೆರೆದಿದ್ದು, ಮಾರ್ಚ್ 25ರಿಂದ ನೋಂದಣಿ ಹಾಗೂ ಏ.1 ರಿಂದ ಖರೀದಿ ಆರಂಭವಾಗಬೇಕಿತ್ತು. ಏ.13ಕ್ಕೂ ನೋಂದಣಿ ಆರಂಭವಾಗಿಲ್ಲ. ಕೆಲವು ಕಡೆಗಳಲ್ಲಿ ರೈತರು ನೋಂದಣಿ ಕೇಂದ್ರಗಳಿಗೆ ಹೋಗಿ ವಾಸಪ್ ಆಗುತ್ತಿದ್ದಾರೆ. ತಾಂತ್ರಿಕ ಕಾರಣದಿಂದ ದಿನಾಂಕವನ್ನೂ ಮುಂದೂಡತ್ತಲೇ ಬರುತ್ತಿದ್ದಾರೆ ಅಧಿಕಾರಿಗಳು.
ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಖರೀದಿಸಲು ಉದ್ದೇಶಿಸಲಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಬೆಲೆಯು ₹3 ಸಾವಿರ ಆಸು–ಪಾಸಿನಲ್ಲಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸಂಗ್ರಹಕ್ಕೆ ವ್ಯವಸ್ಥೆ ಇಲ್ಲದ್ದರಿಂದ ಸಿಕ್ಕ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿ ರೈತರದ್ದಾಗಿದೆ.
ಎಪಿಎಂಸಿಗೆ ತರಲ್ಲ: ಉಳಿದ ಧಾನ್ಯಗಳಂತೆ ಬಿಳಿಜೋಳವನ್ನು ರೈತರು ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ತರುವುದಿಲ್ಲ. ಖರೀದಿದಾರರು ರೈತರ ಹೊಲಗಳಿಗೇ ಹೋಗಿ ಖರೀದಿ ಮಾಡುತ್ತಾರೆ.
‘ನೋಂದಣಿ, ಖರೀದಿ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣದಿಂದ ಆಗಿಲ್ಲ. ಏ.15 ರಿಂದ ನೋಂದಣಿ ಆರಂಭವಾಗಲಿದೆ’ ಎಂದು ಕೆಎಸ್‌ಸಿಎಫ್‌ಸಿ ವ್ಯವಸ್ಥಾಪಕ ಎನ್. ಸಿದ್ದಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.