ADVERTISEMENT

ಬೀಳಗಿಗೆ ಮೆರಗು ತಂದ ಮಹಿಳಾ ಸಾಂಸ್ಕೃತಿಕ ಉತ್ಸವ: ಎಸ್.ಆರ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:14 IST
Last Updated 3 ಜೂನ್ 2025, 14:14 IST
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳೆಯರು ನಡೆಸಿಕೊಟ್ಟ ನಿಶ್ಚಿತಾರ್ಥ ಸಮಾರಂಭದ ದೃಶ್ಯ
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳೆಯರು ನಡೆಸಿಕೊಟ್ಟ ನಿಶ್ಚಿತಾರ್ಥ ಸಮಾರಂಭದ ದೃಶ್ಯ   

ಬೀಳಗಿ: ‘ಪಾರಂಪರಿಕ ಮೌಲ್ಯ, ಮಾನವೀಯ ಸಂಬಂಧಗಳು ಕುಸಿದು ಹೋಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಉತ್ಸವಗಳಂತಹ ಕಾರ್ಯಕ್ರಮಗಳು ಸಂಬಂಧ ಬೆಸೆಯುವ ಕೊಂಡಿಗಳಾಗಿವೆ’ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಸ್ಥಳೀಯ ಪಟ್ಟಣ ಸಹಕಾರ ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಮಂಗಳವಾರ ಬ್ಯಾಂಕಿನ ಸಭಾಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರ ಪರಿಚಯಿಸುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಯೋಜನೆ ಸ್ತುತ್ಯರ್ಹ. ಮಹಿಳೆಯರು ಸ್ವಾವಲಂಬಿ, ಸ್ವಾಭಿಮಾನದ ಬದುಕನ್ನು ಸಶಕ್ತವಾಗಿ ಸಾಗಿಸುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ಯುವ ಜನಾಂಗ ಜನಪದ  ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳಬೇಕು. ತಾಂತ್ರಿಕ ಬದುಕಿನಲ್ಲಿ ಕಳೆದು ಹೋಗಬಾರದು’ಎಂದು  ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಲೂತಿ ಕಿವಿಮಾತು ಹೇಳಿದರು.

ಬ್ಯಾಂಕಿನ ನಿರ್ದೇಶಕರಾದ ಹೇಮಾದ್ರಿ ಕೊಪ್ಪಳ, ಎ.ಎಚ್.ಬೀಳಗಿ, ಕೆ.ಎಸ್. ಪತ್ರಿ, ಗಂಗಣ್ಣ ಕೆರೂರು, ಪಿ.ಬಿ.ಗುರಾಣಿ, ವಿ.ಪಿ.ಆಯಾಚಿತ್,ರಾಜಣ್ಣ ಬಾರಕೇರ, ಸಾಲ ವಸೂಲಾತಿ ವಿಭಾಗದ ವ್ಯವಸ್ಥಾಪಕ ಶಾಹಿರ್ ಬೀಳಗಿ ಇದ್ದರು.

ಮಹಿಳೆಯರು ಮದುವೆ ಸಮಾರಂಭದ ದೃಶ್ಯಗಳನ್ನು ಅಭಿನಯಿಸಿದರು. ಉತ್ತರ ಕರ್ನಾಟಕದ ವೇಷಭೂಷಣಗಳಾದ ಮಹಿಳೆಯರ ಇಳಕಲ್ಲ ಸೀರೆ, ಆಭರಣ ಧರಿಸಿ ಹಣೆತುಂಬ ಕುಂಕುಮ, ತಲೆ ಮೇಲೆ ಸೆರಗು ಹಾಕಿಕೊಂಡಿದ್ದರು. ಪುರುಷರ ಪಾತ್ರವನ್ನೂ ಮಹಿಳೆಯರೇ ನಿಭಾಯಿಸಿದರು. ನೆಹರೂ ಅಂಗಿ, ಧೋತಿ, ತಲೆಗೆ ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದರು. ವರನ ಮನೆ, ವಧುವಿನ ಮನೆಯನ್ನು ನಿರ್ಮಾಣ ಮಾಡಿ ವಧು–ವರರನ್ನು ನೋಡುವ ಸಂಪ್ರದಾಯ, ನಿಶ್ಚಿತಾರ್ಥ, ಬಳೆಶಾಸ್ತ್ರ, ದೇವರ ಕಾರ್ಯ, ಅರಿಸಿಣ ಶಾಸ್ತ್ರ, ಅಕ್ಷತೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ನಂತರ ದಂಪತಿಗೆ ಹುಟ್ಟುವ ಮಗುವಿನ ನಾಮಕರಣ, ಮದುವೆಯ ರಜತ ಮಹೋತ್ಸವ...ಹೀಗೆ ಜೀವನದ ಪ್ರಮುಖ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಅಭಿನಯಿಸಿದರು.

ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಎತ್ತಿನ ಬಂಡಿಯಲ್ಲಿ ವಧುವನ್ನು ಮೆರವಣಿಗೆ ಮೂಲಕ ಕರೆತರಲಾಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.