
ಹುನಗುಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಸದಸ್ಯರು ತಾಲ್ಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯಿತಿ ಎದುರುಗಡೆ ಸೋಮವಾರ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿಕೊಂಡಿದ್ದ ಗ್ರಾಕೂಸ್ ಮುಖಂಡರಾದ ಮಹಾದೇವಿ ಹಡಪದ ಮಾತನಾಡಿ, ‘ಕೆಲಸ ಮಾಡದ ಕಾರ್ಮಿಕರಿಗೆ ಹಣ ಪಾವತಿಸಿದ್ದಾರೆ. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರ್ಮಿಕರಿಗೆ ಹಣ ಪಾವತಿಸಿಲ್ಲ. ಕೆಲಸ ಕೊಟ್ಟು ನಾಲ್ಕು ತಿಂಗಳು ಕಳೆದರೂ ಕೆಲ ಕಾರ್ಮಿಕರಿಗೆ ಹಣ ಪಾವತಿಸಿಲ್ಲ. ಹೀಗಾದರೆ ನಾವು ಬದುಕು ಸಾಗಿಸುವುದಾದರೂ ಹೇಗೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಕೆಲವು ಸದಸ್ಯರ ಅಕೌಂಟ್‌ಗೆ ಹಣ ಪಾವತಿಸದೆ ತಿರಸ್ಕರಿಸಿದ್ದಾರೆ. ಅಂಗವಿಕಲರ ಜಾಬ್ ಕಾರ್ಡ್ ಸಹ ಮಾಡಿಕೊಟ್ಟಿಲ್ಲ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ನೆಪ ಹೇಳಿ ದಿನ ಮುಂದೂಡುತ್ತಿದ್ದಾರೆ. ಸಮಸ್ಯೆಗಳನ್ನು ಸರಿಪಡಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪಿಡಿಒ, ಎಂಜಿನಿಯರ್, ಡಿಎಫ್‌ಟಿ, ಕಾಯಕ ಮಿತ್ರ, ಕೃಷಿ ಇಲಾಖೆ ನರೇಗಾ ಅಧಿಕಾರಿ ಸೇರಿದಂತೆ ವಿವಿಧ ಹಂತದಲ್ಲಿನ ಅಧಿಕಾರಿಗಳು ಕಾರ್ಮಿಕರ ಬಗ್ಗೆ ನಿರ್ಲಕ್ಷ ತೋರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದು ನಂಜಯ್ಯನಮಠ ಕಾರ್ಮಿಕರ ಮುಖಂಡರೊಂದಿಗೆ ಮಾತನಾಡಿ, ‘ನಿಮ್ಮ ಬೇಡಿಕೆಗಳನ್ನು ಒಂದು ವಾರಾದೊಳಗೆ ಹಂತ ಹಂತವಾಗಿ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.
ಅಧಿಕಾರಿಗಳಾದ ಶಿವರಾಜ ಹಾವಲ್ದಾರ, ಶ್ರೀಶೈಲ ಪೂಜಾರಿ, ಕಾರ್ಮಿಕರಾದ ಸಂಗನಬಸಮ್ಮ ಪಾಟೀಲ, ಸುನಂದ ಹಳ್ಳೂರ, ಸೈನಜಾ ಪಿಂಜಾರ, ಮಂಜುಳಾ ಕಮತಗಿ, ಶಿವಪ್ಪ ಕುಂಬಾರ, ನೀಲಮ್ಮ ವಡಗೇರಿ, ಗೀತಾ ರಾಮವಾಡಗಿ, ಮಹಾಂತೇಶ ವಾಲಿಕಾರ ಇದ್ದರು.
ಹಿರೇಬಾದವಾಡಗಿ, ಚಿಕ್ಕಬಾದಡವಾಗಿ, ವೀರಾಪೂರ, ಬನ್ನಿಹಟ್ಟಿ ಗ್ರಾಮಗಳ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.