ಬಾಗಲಕೋಟೆ: ‘ದೇಶದ ಕೃಷಿ ಭೂಮಿಯಲ್ಲಿ ಕೇವಲ ಶೇ 18ರಷ್ಟರಲ್ಲಿ ಮಾತ್ರ ತೋಟಗಾರಿಕೆ ಬೆಳೆಗಳಿದ್ದರೂ, ಕೃಷಿ ಜಿಡಿಪಿಗೆ ತೋಟಗಾರಿಕೆ ಶೇ 30ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಸುಸ್ಥಿರ ಕೃಷಿಯಲ್ಲಿ ತೋಟಗಾರಿಕೆ ಜಾಗತಿಕವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ’ ಎಂದು ಹೈದರಾಬಾದ್ ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ ಮಹಾ ನಿರ್ದೇಶಕ ಹಿಮಾಂಶು ಪಾಠಕ್ ಹೇಳಿದರು.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 14ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಭಾರತವು ಹಣ್ಣು ಮತ್ತು ತರಕಾರಿಗಳ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಈಗ 1.4 ಟ್ರಿಲಿಯನ್ ಡಾಲರ್ ಮೌಲ್ಯದ ಜಾಗತಿಕ ತೋಟಗಾರಿಕೆಯ ಮೌಲ್ಯವು 2032ರ ವೇಳೆಗೆ 2.3 ಟ್ರಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದರು.
‘ತೋಟಗಾರಿಕೆಯು ಆರ್ಥಿಕ ಅಭಿವೃದ್ದಿಯ ಎಂಜಿನ್ ಆಗಿದ್ದು, ಬೆಳೆ ವೈವಿದ್ಯತೆಯನ್ನು ಸಕ್ರಿಯಗೊಳಿಸಿ ಕೃಷಿ-ಕೈಗಾರಿಕೆಗಳನ್ನು ಬೆಂಬಲಿಸಿ ಗ್ರಾಮೀಣ ಉದ್ಯಮಿಗಳನ್ನು ಸಬಲೀಕರಣಗೊಳಿಸುತ್ತದೆ. ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಏಳನೇ ಸ್ಥಾನ ಪಡೆದಿದೆ. ಮಸಾಲೆ ಪದಾರ್ಥಗಳ ಉತ್ಪಾದನೆಯಲ್ಲಿ ಶೇ 40ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ’ ಎಂದು ಹೇಳಿದರು.
‘ಭಾರತದ ತೋಟಗಾರಿಕೆ ಆಂದೋಲನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅಡಿಕೆ, ಕಾಫಿ, ತೆಂಗಿನಕಾಯಿ, ಅರಿಸಿನ, ಏಲಕ್ಕಿ, ಶುಂಠಿ ಮತ್ತು ಕಾಳು ಮೆಣಸಿನಂತಹ ಹೆಚ್ಚಿನ ಮೌಲ್ಯದ ತೋಟಗಾರಿಕೆ ಬೆಳೆಗಳನ್ನು ಉತ್ಪಾದಿಸುತ್ತಿದೆ. ಮಾವು, ದ್ರಾಕ್ಷಿ, ಮಸಾಲೆ ಪದಾರ್ಥ ಮತ್ತು ತರಕಾರಿ ಬೆಳೆಗಳಿಗೆ ಹೆಸರುವಾಸಿಯಾಗಿದೆ’ ಎಂದರು.
‘ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ತೋಟಗಾರಿಕೆ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮಿದೆ. ಕೇವಲ 16 ವರ್ಷಗಳಲ್ಲಿ ವಿಶ್ವವಿದ್ಯಾಲಯವು ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ವಿದ್ಯಾರ್ಥಿಗಳು ಫೆಲೋಶಿಪ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಪ್ರಗತಿ ವರದಿ ಮಂಡಿಸಿದರು. ತೋವಿವಿ ಕುಲಸಚಿವ ಮಹಾದೇವ ಮುರಗಿ, ಶಿಕ್ಷಣ ನಿರ್ದೇಶಕ ಎನ್.ಕೆ. ಹೆಗಡೆ, ಆಡಳಿತ ಮಂಡಳಿಯ ನಿರ್ದೇಶಕರಾದ ಶಾಸಕ ಭೀಮಸೇನ ಚಿಮ್ಮನಕಟ್ಟಿ, ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ ಉಪಸ್ಥಿತರಿದ್ದರು.
’ತೋಟಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ‘
ಬಾಗಲಕೋಟೆ: ‘ಗ್ರಾಮೀಣ ಅಭಿವೃದ್ಧಿ ಪೌಷ್ಟಿಕಾಂಶ ಆಹಾರ ಉತ್ಪಾದನೆ ಪರಿಸರ ಸಂರಕ್ಷಣೆಯಲ್ಲಿ ತೋಟಗಾರಿಕೆ ಕ್ಷೇತ್ರದ ಪಾತ್ರ ಮಹತದ್ದಾಗಿದೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು. ಘಟಿಕೋತ್ಸವದಲ್ಲಿ ಮಾತನಾಡಿದ ಅವರು ‘ಔಷಧ ಸುಗಂಧ ಕಾಸ್ಮೆಟಿಕ್ ಉತ್ಪಾದನೆಯಲ್ಲಿ ಹೂವುಗಳ ಬಳಕೆಯಾಗುತ್ತಿದ್ದು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೂವುಗಳ ಬೆಳೆ ಬೆಳೆಯಲು ರೈತರು ಮುಂದಾಗಬೇಕು’ ಎಂದರು. ‘ಭಾರತವು ವಿಶ್ವದ ಅರ್ಥ ವ್ಯವಸ್ಥೆಯಲ್ಲಿ ನಾಲ್ಕನೇ ಪಾತ್ರ ಪಡೆಯುವಲ್ಲಿ ಕೃಷಿ ತೋಟಗಾರಿಕೆ ಕ್ಷೇತ್ರಗಳ ಕೊಡುಗೆ ಇದೆ. ತೋಟಗಾರಿಕೆ ಪದವಿ ಪಡೆಯುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಮಹಿಳಾ ಸಶಕ್ತೀಕರಣದ ಪರಿಣಾಮವಾಗಿದೆ’ ಎಂದು ಹೇಳಿದರು. ‘ಸುಸ್ಥಿರ ಕೃಷಿ ಡಿಜಿಟಲ್ ಫಾರ್ಮಿಂಗ್ ಸ್ಮಾರ್ಟ್ ಫಾರ್ಮಿಂಗ್ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅವರಿಗೂ ತಂತ್ರಜ್ಞಾನವನ್ನು ತಲುಪಿಸುವ ಮೂಲಕ ಅವರನ್ನು ಆತ್ಮನಿರ್ಭರ್‌ರನ್ನಾಗಿ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.