ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದ ಬಂದಲಕ್ಷ್ಮಿದೇವಿ ದೇವಸ್ಥಾನದ ಆವರಣದಲ್ಲಿ ಬಂದಲಕ್ಷ್ಮಿ ದೇವಿ ಜಾತ್ರೆ ಅಂಗವಾಗಿ ಗುರುವಾರ ಸಂಜೆ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ ಕೇಸರಿ ನಾಗರಾಜ್ ಬಸಿಡೋನಿ ಗೆಲುವಿನ ನಗೆ ಬೀರಿದರು.
ಒಂದನೇ ನಂಬರ್ ಕುಸ್ತಿಯಲ್ಲಿ ಸೊಲ್ಲಾಪುರದ ಅನೀಲ ಡೋತ್ರೆ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ನಾಗರಾಜ್ ಕುಸ್ತಿ ನಿಕಾಲಿ ಮಾಡಿ ಸಂಭ್ರಮಿಸಿದರು.
ತೀವ್ರ ಕುತೂಹಲ ಕೆರಳಿಸಿದ ಎರಡನೇ ನಂಬರ್ ಕುಸ್ತಿಯಲ್ಲಿ ಉಪಕರ್ನಾಟಕ ಕೇಸರಿ ಶಿವಾನಂದ ನಿರ್ವಾನಟ್ಟಿ ಅವರನ್ನು ಸಾಂಗ್ಲಿಯ ರಿಯಾಜ್ ಮುಲ್ಲಾ ಸೋಲಿಸಿದರು. ಮೂರನೇ ನಂಬರ್ ಕುಸ್ತಿಯಲ್ಲಿ ಕೊಲ್ಲಾಪುರದ ವಿಶಾಲ ಶಳಕೆ ಅವರನ್ನು ಗೊಡಗೇರಿಯ ಪ್ರಕಾಶ ಇಂಗಳಗಿ ಹಾಗೂ ನಾಲ್ಕನೇ ನಂಬರ್ ಕುಸ್ತಿಯಲ್ಲಿ ಸಾಂಗ್ಲಿಯ ಆಸೀಫ್ ಮುಲಾನಿ ಅವರನ್ನು ರಬಕವಿಯ ಸಾಗರ ಜಗದಾಳ ಸೋಲಿಸಿದರು.
ಹನಗಂಡಿ, ಶಿಂಧಿಹಟ್ಟಿ, ಚಿಕ್ಕಬಾಗೇವಾಡಿ, ಗಂದಿಗವಾಡ, ಜಮಖಂಡಿ, ಅಕ್ಕಿಮರಡಿ, ಹೊಸೂರ, ಚಿಮ್ಮಡ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಕುಸ್ತಿಪಟುಗಳು 25ಕ್ಕೂ ಹೆಚ್ಚು ಕುಸ್ತಿ ಪಂದ್ಯದಲ್ಲಿ ಸೆಣಸಾಟ ನಡೆಸಿದರು. ಕೆಲ ಪಂದ್ಯಗಳನ್ನು ನಿಕಾಲಿಯಾಗದೆ ಸಮಬಲ ಫಲಿತಾಂಶ ಘೋಷಿಸಲಾಯಿತು.
ಮುಖಂಡರಾದ ಧರೇಪ್ಪ ಸಾಂಗಲಿಕರ, ಚಿಕ್ಕಪ್ಪ ನಾಯಕ, ಮಹಾಲಿಂಗ ಕೊಣ್ಣೂರ, ಪ್ರವೀಣ ಪಾಟೀಲ, ಮಂಜು ಮುಗಳಖೋಡ, ಶ್ರೀಶೈಲ ದೊಡಹಟ್ಟಿ, ಮಹಾಲಿಂಗ ಹೇಗಾಡಿ, ಕಲ್ಲಪ್ಪ ಹೊಸಪೇಟಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.