ADVERTISEMENT

ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ಕಾನೂನು: ಯತ್ನಾಳ ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:19 IST
Last Updated 24 ಫೆಬ್ರುವರಿ 2026, 6:19 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬಾಗಲಕೋಟೆ: ‘ಕಲ್ಲು ಎಸೆದವರನ್ನು ಬಿಟ್ಟು, ಶಾಂತಿಯುತವಾಗಿರುವವರನ್ನು ಬಂಧಿಸಿದರೆ ರಾಜ್ಯದಾದ್ಯಂತ ಸಂಘರ್ಷ ಆಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರಿಗೆ ಮದ ಬಂದಿದೆ. ನಮ್ಮದೇ ಕಾಂಗ್ರೆಸ್‌ ಸರ್ಕಾರವಿದೆ. ಏನೂ ಮಾಡುವುದಿಲ್ಲ ಎಂದು ವ್ಯವಸ್ಥಿತವಾಗಿ ಗಲಾಟೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಅವರಿಗೊಂದು ಕಾನೂನು, ಹಿಂದೂಗಳಿಗೊಂದು ಕಾನೂನು ಮಾಡುವ ಮೂಲಕ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದಾಗಿ ಹಿಂದೂಗಳಲ್ಲಿ ಸುರಕ್ಷಿತ ಭಾವನೆ ಇಲ್ಲ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದರು.

ADVERTISEMENT

‘ಮುಸ್ಲಿಂ ಮೆರವಣಿಗೆ ಮಾಡುವಾಗ ದೇವಸ್ಥಾನದಿಂದ ಎಂದಾದರೂ ಕಲ್ಲು ಎಸೆಯಲಾಗಿದೆಯಾ? ನಾವೆಂದು ಕಲ್ಲು ಎಸೆಯುವುದಿಲ್ಲ. ಪಂಕಾ ಮಸೀದಿ ಅಧಿಕೃತವೇ ಎಂಬ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.

‘ವಿಧಾನಮಂಡಲ ಕಲಾಪ ನಡೆದಾಗಲೂ ಗ್ಯಾಲರಿಯಲ್ಲಿ ಅವರೇ ಕುಳಿತಿರುತ್ತಾರೆ. ಆಗ ಇದು ಪಾಕಿಸ್ತಾನ ವಿಧಾನಸೌಧವೋ, ಕರ್ನಾಟಕದ ವಿಧಾನಸೌಧವೋ ಎಂಬ ಅನುಮಾನ ಬರುತ್ತದೆ. ಹಿಂದೂ ಸಮಾಜದ ಮೆರವಣಿಗಳಿದ್ದಾಗ, ಆ ಮಾರ್ಗದಲ್ಲಿ ಬರುವ ಮಸೀದಿಗಳನ್ನು ಬಂದ್ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬಸವಣ್ಣ, ಶಿವಾಜಿ ಮಹಾರಾಜರ ಮೂರ್ತಿಗಳ ಪ್ರತಿಷ್ಠಾಪನೆ ಮುಂದೆ ನಡೆಯಲಿರುವ ಜಯಂತಿ ಮೆರವಣಿಗೆಯೊಳಗೆ ಆಗಬೇಕು. ಇಲ್ಲದಿದ್ದರೆ, ಬಲಿದಾನವಾದರೂ ಸರಿ ನಾವೇ ಪ್ರತಿಷ್ಠಾಪನೆ ಮಾಡುತ್ತೇವೆ. 2028ಕ್ಕೆ ರಾಜ್ಯದಲ್ಲಿ ಜೆಸಿಬಿ ಪಾರ್ಟಿ ಅಧಿಕಾರಕ್ಕೆ ಬರಲಿದೆ’ ಎಂದರು.

ಅಶೋಕ ಲಿಂಬಾವಳಿ, ಮೋಹನ ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.