ADVERTISEMENT

ಅಂಚೆ ಕಾರ್ಡ್ ಚಳವಳಿಗೆ ಕುಂ.ವೀ.ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:00 IST
Last Updated 5 ಡಿಸೆಂಬರ್ 2012, 6:00 IST

ಕೊಟ್ಟೂರು: ಕೊಟ್ಟೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಕೊಟ್ಟೂರು ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ, ಸಾಹಿತಿ ಕುಂ. ವೀರಭದ್ರಪ್ಪ ಅಂಚೆ ಕಾರ್ಡ್ ಚಳವಳಿಗೆ ಚಾಲನೆ ನೀಡಿದರು.

ಪಟ್ಟಣದಲ್ಲಿ ಮಂಗಳವಾರ ಇಲ್ಲಿನ ಇಂದೂ ಕಾಲೇಜ್‌ನಲ್ಲಿ ಅಂಚೆ ಕಾರ್ಡ್ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ಆದ್ದರಿಂದ ಕೊಟ್ಟೂರು ತಾಲ್ಲೂಕನ್ನಾಗಿ  ಸರ್ಕಾರ ಘೋಷಿಸಲು ವಿದ್ಯಾರ್ಥಿಗಳು ಅಂಚೆ ಕಾರ್ಡ್ ಬರೆಯುವ ಚಳವಳಿಗೆ ಮುಂದಾಗಬೇಕು ಎಂದರು.

ಕೇವಲ ಎಂಟು ದಿನಗಳಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸುಮಾರು 15ರಿಂದ 20 ಸಾವಿರ ಅಂಚೆ ಕಾರ್ಡ್‌ಗಳನ್ನು ಬರೆದು ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ  ಕೊಟ್ಟೂರು ತಾಲ್ಲೂಕನ್ನಾಗಿ ಘೋಷಿಸುವಂತೆ ಒತ್ತಾಯಿಸಬೇಕು ಎಂದು ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಅಂಚೆ ಕಾರ್ಡ್ ಬರೆಯುವ  ಚಳವಳಿ ಯೋಜಿತ ಕೊಟ್ಟೂರು ತಾಲ್ಲೂಕಿಗೆ ಸೇರುವ ಎಲ್ಲಾ ಗ್ರಾಮಗಳಿಗೂ ವಿಸ್ತರಿಸಲಿದೆ ಎಂದರು.

ಪ್ರತಿ ಹಳ್ಳಿಗೂ ಬೈಕ್ ರ‌್ಯಾಲಿ ಹಮ್ಮಿಕೊಂಡು ಗ್ರಾಮಸ್ಥರಲ್ಲಿ ಕೊಟ್ಟೂರು ತಾಲ್ಲೂಕು ಕುರಿತು ಅರಿವು ಮೂಡಿಸುವ ಚಿಂತನೆ ಹೋರಾಟ ಸಮಿತಿಗೆ ಇದೆ. ಕೊಟ್ಟೂರು ಪಟ್ಟಣದಲ್ಲಿ ಸಾವಿರಾರು ಜನರಿಂದ ಪಂಜಿನ ಮೆರವಣಿಗೆ ಹಮ್ಮಿಕೊಂಡು ಕೊಟ್ಟೂರು ತಾಲ್ಲೂಕು ಕೇಂದ್ರವಾಗಿಸುವಂತೆ ಸರ್ಕಾರದ ಒತ್ತಡ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ, ಕೊಟ್ಟೂರು  ಯಾವಾಗಲೋ ತಾಲ್ಲೂಕು ಕೇಂದ್ರವಾಗಬೇಕಿತ್ತು. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಆಗಲಿಲ್ಲ ಎಂದರು. ಹೋರಾಟ ಸಮಿತಿ ಉಪಾಧ್ಯಕ್ಷ ದೇವರಮನಿ ಶಿವಚರಣ, ಕಾರ್ಯ ಕಾರ್ಯಮಂಡಳಿ ಸದಸ್ಯ ಸುಧಾಕರ ಪಾಟೀಲ್, ಇಂದು ಕಾಲೇಜಿನ ಪ್ರಾಚಾರ್ಯ ವೀರಭದ್ರಪ್ಪ  ಇದ್ದರು. ನೀಲಾಂಬಿಕೆ ಪ್ರಾರ್ಥಿಸಿದರು,  ಕೆ.ಬಿ. ತಿಪ್ಪೇಸ್ವಾಮಿ ಸ್ವಾಗತಿಸಿದರು, ವೀರಭದ್ರಪ್ಪ ವಂದಿಸಿದರು.

ನಂತರ ಕುಂ. ವೀ ನೇತೃತ್ವದ ಹೋರಾಟ ಸಮಿತಿ ಕೊಟ್ಟೂರೇಶ್ವರ ಕಾಲೇಜು, ಭಾಗೀರಥಿ ಮರುಳಸಿದ್ದನ ಗೌಡ ಕಾಲೇಜ್, ತುಂಗಭದ್ರ ಶಿಕ್ಷಣ ಕಾಲೇಜು, ಶ್ರೀಗುರು ತಿಪ್ಪೇ ರುದ್ರ ಸ್ವಾಮಿ ವಿಜ್ಞಾನ ಕಾಲೇಜು, ಸರ್ಕಾರಿ ಬಾಲಕರ ಪ್ರೌಢಶಾಲೆ,  ಬಾಲಕಿಯರ ಪ್ರೌಢ ಶಾಲೆ, ಮಹಾದೇವ ತಾತಾ ಪ್ರೌಢ ಶಾ ಮುಂತಾದ ಶಾಲೆಗೆ ಭೇಟಿ ನೀಡಿ ಕೊಟ್ಟೂರು ತಾಲ್ಲೂಕು ಕೇಂದ್ರವಾಗಲು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಮುಖ್ಯಮಂತ್ರಿಗೆ ಪತ್ರ ಬರೆಯವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.