ADVERTISEMENT

ಅಧಿಕಾರಿಗಳ ವಿರುದ್ಧ ಸದಸ್ಯರ ಅಸಮಾಧಾನ

ಹೊಸಪೇಟೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:29 IST
Last Updated 20 ಡಿಸೆಂಬರ್ 2013, 6:29 IST

ಹೊಸಪೇಟೆ: ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆ ಕೇವಲ ಸಮಸ್ಯೆಗಳ ಕುರಿತು ಚರ್ಚಿಸಲು ಮಾತ್ರ ಸೀಮಿತವಾಗಿದೆ. ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ  ಸದಸ್ಯರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಸಿ.ಡಿ.ಮಹದೇವ ಮಾತನಾಡಿ, ‘ಕಳೆದ ಸಭೆಯಲ್ಲಿ ಗಂಭೀರ ವಿಷಯಗಳ ಚರ್ಚೆ ನಡೆಸಿ ಪರಿಹರಿಸಬೇಕು ಎಂದು ಸೂಚಿಸಿದರೂ, ಯಾವ ಇಲಾಖೆಯ ಅಧಿಕಾರಿಗಳೂ ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದರು.

‘ಸದಸ್ಯರು ಕೇಳಿದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಆಯಾ ತಾಲ್ಲೂಕು ಪಂಚಾಯ್ತಿ ಸದಸ್ಯ ಕ್ಷೇತ್ರಗಳ ಗ್ರಾಮ ಸಭೆಗಳಿಗೆ ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸಬೇಕು ಎಂಬ ಕನಿಷ್ಠ ಸೌಜನ್ಯವೂ ಪಿಡಿಒಗಳಿಗೆ ಇಲ್ಲ. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕು ಪಂಚಾಯ್ತಿ ಈಗ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಇದೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಆಡಳಿತ ನಡೆಸುವುದಾದರೆ ಕಾಂಗ್ರೆಸ್‌ ಅಧಿಕಾರ ನಡೆಸಬೇಕು. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ ಅಧಿಕಾರ ಬಿಟ್ಟು ಬನ್ನಿ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೋರಿ ಫಕ್ಕೀರಪ್ಪ ಅವರಿಗೆ ಸವಾಲು ಹಾಕಿದರು.

ಮಹವೇವ ಅವರ ಆರೋಪಕ್ಕೆ ಉತ್ತರಿಸಿದ ಕೋರಿ ಫಕ್ಕೀರಪ್ಪ, ‘ಸಭೆಯಲ್ಲಿ ಯಾರೂ ಅಧಿಕಾರಿಗಳ ಪರ ವಕಾಲತ್ತು ವಹಿಸಿಕೊಂಡು ಮಾತನಾಡಿಲ್ಲ. ಸಭೆಗೆ ಗೈರಾದ ಹಾಗೂ ಸದಸ್ಯರ ಮಾತಿಗೆ ಬೆಲೆ ಕೊಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯ್ತಿಗೆ ಸಿಫಾರಸು ಮಾಡಲಾಗಿದೆ. ಈ ಸಭೆಯಲ್ಲಿಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ಹೇಳಿದರು.


ಕಾರ್ಯನಿರ್ವಾಹಕ ಅಧಿಕಾರಿ ರಮೇಶ ತಳವಾರ ಮಾತನಾಡಿ, ‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆ, ಫಲಾನುಭವಿಗಳ ಆಯ್ಕೆ ಕುರಿತು ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಪರಿಗಣಿಸುವ ಕುರಿತು ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ಕುರಿತು ಇದೇ 26ರಂದು ಪಿಡಿಒ, ಕಾರ್ಯದರ್ಶಿ ಹಾಗೂ ಬಿಲ್‌ಕಲೆಕ್ಟರ್‌ಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಲಾಗುವುದು’ ಎಂದು ಚರ್ಚೆಗೆ ತೆರೆ ಎಳೆದರು.

ಮರಿಯಮ್ಮನಹಳ್ಳಿ ಸದಸ್ಯ ಯು.ಸೋಮಪ್ಪ ಮಾತನಾಡಿ, ‘ಮರಿಯಮ್ಮನಹಳ್ಳಿ ಬಸ್‌ ನಿಲ್ದಾಣದ ಒಳಗೆ ವಾಹನಗಳನ್ನು ನಿಲ್ಲಿಸಲು ಜಾಗ ಬಿಡದಂತೆ ಗೂಡಂಗಡಿಗಳನ್ನು ಹಾಕಿಕೊಳ್ಳಲಾಗಿದೆ. ಈ ಕುರಿತು ಕಳೆದ ಸಭೆಯಲ್ಲಿಯೇ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ ಬಸ್‌ ನಿಲ್ದಾಣದ ಶೌಚಾಲಯಗಳಲ್ಲಿ  ಗುತ್ತಿಗೆದಾರರು ಮಹಿಳೆಯರಿಂದ ಹಣ ಪಡೆಯುತ್ತಿದ್ದಾರೆ.  ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. ಈಶಾನ್ಯ ಸಾರಿಗೆ ಅಧಿಕಾರಿ ದುರ್ಗಪ್ಪ ಅವರು ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಸಭೆಯಲ್ಲಿ ಆಯುಷ್ಯ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲಿಸಲಾಯಿತು.

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ ಹಾಗೂ ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್‌ ಅವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ಭಾರತ ರತ್ನ ಪುರಸ್ಕಾರ ಪಡೆದ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಹಾಗೂ ಸಚಿನ್‌ ಟೆಂಡೂಲ್ಕರ್‌ ಅವರನ್ನು ರಮೇಶ ತಳವಾರ ಅಭಿನಂದಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ವಹಿಸಿದ್ದರು. ಉಪಾಧ್ಯಕ್ಷೆ ದಾಕ್ಷಾಯಣಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT