ADVERTISEMENT

ಅನ್ನದಾತನ ಬವಣೆಗೆ ಕೊನೆಯಿಲ್ಲವೇ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 5:37 IST
Last Updated 26 ಜುಲೈ 2013, 5:37 IST
ಬಿತ್ತನೆಯ ಕಾರ್ಯದಲ್ಲಿ  ತೊಡಗಿರುವ ರೈತರು
ಬಿತ್ತನೆಯ ಕಾರ್ಯದಲ್ಲಿ ತೊಡಗಿರುವ ರೈತರು   

ಕೊಟ್ಟೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದ ಮುಂಗಾರು ಬಿತ್ತನೆ ಕಾರ್ಯ ಚುರುಕಾಗಿ ಸಾಗಿದೆ. ಅನ್ನದಾತರು ಹರ್ಷ ಚಿತ್ತರಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 26.5 ಮಿ.ಮೀ. ಉತ್ತಮ ಮಳೆಯಾಗಿದೆ. ಒಟ್ಟು 6,470 ಹೆಕ್ಟೇರ್ ಪ್ರದೇಶಗಳಲ್ಲಿ ಜೋಳ , ಸಜ್ಜೆ , ಹೆಸರು , ಮೆಕ್ಕೆ ಜೋಳ , ಶೇಂಗಾ , ಹತ್ತಿ ಬಿತ್ತನೆ ಕಾರ್ಯನಡೆದಿದೆ.

ರೈತ ಸಂಪರ್ಕ ಕೇಂದ್ರವೊಂದರಲ್ಲಿ ಜೋಳ , ಸಜ್ಜೆ 91 ಕ್ವಿಂ, ಮೆಕ್ಕೆ ಜೋಳ 739 ಕ್ವಿಂ, ತೊಗರಿ , ಹೆಸರು 20  ಕ್ವಿಂ, ಮಾರಾಟವಾಗಿದೆ. ಬೀಜಗಳ ಬೆಲೆ ಏರಿಕೆಯಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಈ ಬಾರಿ ವಾಣಿಜ್ಯ ಬೆಳೆಗಳ ಬಿತ್ತನೆಗೆ ಹೆಚ್ಚು ಮುಂದಾಗಿರುವುದು ವಿಶೇಷವಾಗಿದೆ.

ಚಿಕ್ಕಜೋಗಿಹಳ್ಳಿ, ಕಡೇಕೊಳ, ಬಣವಿಕಲ್ಲು ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿರುವುದರಿಂದ ಬಿತ್ತನೆಯ ನಂತರ ಹಗಲು ರಾತ್ರಿ ಹೊಲ ಕಾಯಬೇಕಾದ ಪರಿಸ್ಧಿತಿಯಿದೆ. ಕಾಡು ಹಂದಿಗಳು ಶೇಂಗಾ, ಮಕ್ಕೆಜೋಳ ಮುಂತಾದ ಬಿತ್ತಿದ ಬೀಜಗಳನ್ನು ಸಾಲುಹಿಡಿದು ತಿನ್ನುವುದರಿಂದ ದುಬಾರಿ ಬೀಜ, ಎತ್ತಿನ ಗಳೇವು , ಆಳಿನ ಕೂಲಿಗಳಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಡೇಕೊಳ ಗ್ರಾಮದ ರೈತ ನಾಗರಾಜ ತಮ್ಮ ಅಳಲು ತೋಡಿಕೊಂಡರು.

ಕಾಡುಹಂದಿಗಳಿಂದ ರಕ್ಷಿಸಲು ರಾತ್ರಿ ಹೊಲ ಕಾಯುವಾಗ ಕರಡಿಗಳ ಹಾವಳಿಯಿಂದ  ತಪ್ಪಿಸಿಕೊಳ್ಳಬೇಕಾಗಿದೆ. ಈ ಪ್ರದೇಶದಲ್ಲಿ ಕರಡಿಗಳು ವಾಸಿಸುತ್ತಿರುವುದರಿಂದ ಗುಂಪು-ಗುಂಪಾಗಿ ರೈತರು ಬೆಂಕಿ ಹಚ್ಚಿಕೊಂಡು ರಾತ್ರಿ ಇಡೀ  ಕಾವಲು ಕಾಯುತ್ತಿದ್ದಾರೆ. ನಮ್ಮ ಕಷ್ಟಗಳನ್ನು ಯಾರು ಕೇಳದಂತಾಗಿದೆ. ಸಂಬಂಧಿಸಿದವರು ಕಾಡು ಹಂದಿಗಳ, ಕರಡಿಗಳ ಉಪಟಳದಿಂದ ಪಾರು ಮಾಡಬೇಕೆಂದು ಗುಂಡುಮುಣಗು ರೈತರು ಕೇಳಿಕೊಂಡಿದ್ದಾರೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಮೇಲುಗೊಬ್ಬರ ನೀಡುವ ಮಂಗಳ ಯೂರಿಯಾ, ಸ್ಪಿಕ್ ಯೂರಿಯಾ ಅವಶ್ಯವಿದೆ ರೈತರು ಖಾಸಗಿ ಗೊಬ್ಬರ ಮಾರಾಟ ಮಳಿಗೆಗಳಿಗೆ ತೆರಳಿದರೆ ಅಲ್ಲಿ ದುಪ್ಪಟ್ಟು ಬೆಲೆಗೆ ತೆರಬೇಕಾದ ಪರಿಸ್ಧಿತಿ ಇದೆ. ರೂ 285 ಬೆಲೆಯ ರಸಗೊಬ್ಬರವನ್ನು ರೂ 350ರಿಂದ 450 ವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮಳೆಯ ಆಗಮನದಿಂದ ರೈತರಿಗೆ ಸಂತಸ ಒಂದು ಕಡೆಯಾದರೆ ದುಪ್ಪಟ್ಟು ಬೆಲೆಗೆ ಡಿಎಪಿ, ಯೂರಿಯಾ, ಮಿಕ್ಸರ್ ರಸಗೊಬ್ಬರಗಳನ್ನು ಖರೀದಿಸಲು ರೈತರು ಹಿಂದೇಟು ಹಾಕಬೇಕಾಗಿದೆ. ಖಾಸಗಿ ವ್ಯಾಪಾರಿಗಳು ಸಾಕಷ್ಟು ಪ್ರಮಾಣದಲ್ಲಿ ಗೋದಾಮುಗಳಲ್ಲಿ ಶೇಖರಿಸಿದ್ದಾರೆ. ರೈತರ ಸಮಯಕ್ಕೆ ಸರಿಯಾಗಿ ವಿತರಿಸದೆ `ಸ್ಟಾಕ್ ಇಲ್ಲಾ' ಎಂಬ ಬೋರ್ಡ್ ನೇತು ಹಾಕುವುದರ ಮೂಲಕ ಕೃತಕ ಅಭಾವ ಸೃಷ್ಟಿಸುತ್ತಿರುವ ವ್ಯಾಪಾರಿಗಳು, ನಂತರ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ.

ಇದನ್ನೆಲ್ಲಾ ನೋಡಿಯು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಕೃಷಿ ಅಧಿಕಾರಿಗಳು ಒಂದೆಡೆಯಾದರೆ ಮತ್ತೊಂದೆಡೆ ವೇದಿಕೆಗಳಲ್ಲಿ ಶಾಸಕರು ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸಲಾಗಿದೆ. ರೈತರು ಆತಂಕಪಡಬೇಕಾಗಿಲ್ಲ ಎಂದು ಹೇಳುತ್ತಾರೆ.

ಅತಿವೃಷ್ಟಿ ಅನಾವೃಷ್ಟಿಗಳಿಂದ ಬಳಲುತ್ತಿರುವ ರೈತ ಸಾಲ-ಸೂಲ ಮಾಡಿ ದುಬಾರಿಯಾಗಿರು ಬೀಜ , ಗೊಬ್ಬರ , ಎತ್ತಿನ ಗಳೇವು , ಆಳಿನ ಕೂಲಿಯಿಂದ ತತ್ತರಿಸಿ ಹೋಗಿದ್ದಾನೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದಾಗ ಅವನಿಗೆ ಸಿಗುವ ಲಾಭಾಂಶವು ಅಷ್ಟಕ್ಕಷ್ಟೇ , ಕೆಲವೊಮ್ಮೆ ಅವನು ವ್ಯಯಿಸಿದ ವೆಚ್ಚವು ಹಿಂತಿರುಗಲಾರದಷ್ಟು ನಷ್ಟವನ್ನು ಅನುಭವಿಸುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.