ADVERTISEMENT

ಅರಿವಿಗೆ ಬಾರದೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ!

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 5:05 IST
Last Updated 23 ಜೂನ್ 2013, 5:05 IST

ಬಳ್ಳಾರಿ: ಮುನ್ಸೂಚನೆಯನ್ನೇ ನೀಡದೆ ಅಪರಿಚಿತನೊಬ್ಬ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ 42ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಕರೆದೊಯ್ದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿರುವ ಘಟನೆ ಬಳ್ಳಾರಿಯ ರಾಮಯ್ಯ ಕಾಲೊನಿಯಲ್ಲಿ ನಡೆದಿದೆ.

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಗರದ ಶ್ರೀರಾಮಪುರ ಕಾಲೋನಿ ನಿವಾಸಿ ವೆಂಕಟೇಶ ಗುರುವಾರ ಕೆಲಸ ಮಾಡಿ ದಣಿದು ಸುಸ್ತಾಗಿ ಹಳೆ ಬಸ್ ನಿಲ್ದಾಣದಲ್ಲಿ ಮಲಗಿದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳಕ್ಕೆ ಆಗಮಿಸಿ, ಚಿಕಿತ್ಸೆ ಕೊಡಿಸುವುದಾಗಿ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಸಂತಾನ ಹರಣ ಚಿಕಿತ್ಸೆ ಮಾಡಿಸಿದ್ದಾಗಿ ವೆಂಕಟೇಶ ದೂರಿದ್ದಾನೆ.

ಅಲ್ಲದೆ, ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗೆ ನೀಡುವ ಸಹಾಯಧನವನ್ನೂ ಅದೇ ಅಪರಿಚಿತ ವ್ಯಕ್ತಿ ಪಡೆದು, ಪರಾರಿಯಾಗಿದ್ದಾನೆ ಎಂದು ಆತ ಆರೋಪಿಸಿದ್ದಾನೆ.

ಚಿಕಿತ್ಸೆಯ ನಂತರ ಎಚ್ಚರಗೊಂಡ ವೆಂಕಟೇಶನಿಗೆ ತನಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿರುವುದು ಗೊತ್ತಾಗಿದ್ದು, ಶನಿವಾರ ಸಂಬಂಧಿಗಳೊಡನೆ ಆಸ್ಪತ್ರೆಗೆ ಬಂದು ಕೇಳಿದರೆ, `ನಿಮ್ಮ ಅನುಮತಿ ಮತ್ತು ರುಜು ಪಡೆದುಕೊಂಡೇ ನಾವು ಶಸ್ತ್ರಚಿಕಿತ್ಸೆ ಮಾಡಿದ್ದು, ನಿಮ್ಮನ್ನು ಕರೆತಂದಿದ್ದ ವ್ಯಕ್ತಿಯನ್ನೇ ಈ ಬಗ್ಗೆ ಕೇಳಿ' ಎಂದು ವೈದ್ಯರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಪರಿಚಯ ಮಾಡಿಕೊಂಡು ಹತ್ತಿಪ್ಪತ್ತು ರೂಪಾಯಿ ನೀಡಿ ಪುಸಲಾಯಿಸಿದ್ದ ಅಪರಿಚಿತ ವ್ಯಕ್ತಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದಾನೆ.

ಇದರಿಂದ ಬೇಸತ್ತಿರುವ ವೆಂಕಟೇಶ ನ್ಯಾಯ ದೊರಕಿಸಿಕೊಡುವಂತೆ ಸ್ಥಳೀಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಅವಿವಾಹಿತನಾಗಿರುವ ವೆಂಕಟೇಶ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಆತನನ್ನು ತೀವ್ರ ಘಾಸಿಗೊಳಗಾಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.