ADVERTISEMENT

ಅವಶೇಷದ ಅಡಿಯಲ್ಲಿ ಆರದ ಬೆಂಕಿ...

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 6:36 IST
Last Updated 6 ಜೂನ್ 2013, 6:36 IST

ಬಳ್ಳಾರಿ: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಬಾಲಾಜಿ ಕೋಲ್ಡ್ ಸ್ಟೋರೇಜ್ (ಶೀತಲೀಕರಣ ಘಟಕ)ನಲ್ಲಿ ಕಾಣಿಸಿಕೊಂಡಿದ್ದ ಆಕಸ್ಮಿಕ ಬೆಂಕಿ ಬುಧವಾರ ತಹಬದಿಗೆ ಬಂದಿದ್ದು, ಅಗ್ನಿಶಾಮಕದ ದಳದ ಸಿಬ್ಬಂದಿ ಕಟ್ಟಡ ಅವಶೇಷದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಅವಗಡದಿಂದಾಗಿ ಈ ಘಟಕದಲ್ಲಿ ರೈತರು ಇರಿಸಿದ್ದ ಎಲ್ಲ ಆಹಾರ ಉತ್ಪನ್ನಗಳು ಸುಟ್ಟು ಕರಕಲಾಗಿದ್ದು, ಐದು ಮಹಡಿಯ ಬೃಹತ್ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದೆ. ಮಂಗಳವಾರ ರಾತ್ರಿ ಕಟ್ಟಡದ ಇನ್ನೊಂದು ಪಾರ್ಶ್ವವೂ ಕುಸಿದುಬಿದ್ದಿದ್ದು, ಒಳಗಿನ ದಾಸ್ತಾನಿಗೆ ಅಂಟಿಕೊಂಡಿರುವ ಬೆಂಕಿ ಈಗಲೂ ಉರಿಯುತ್ತಿದೆ. ಅಗ್ನಿಶಾಮಕ ದಳದ ವಾಹನಗಳಿಂದ ಬುಧವಾರ ಮಧ್ಯಾಹ್ನದವರೆಗೆ ನೀರು ಸಿಂಪಡಿಸುವ ಕಾರ್ಯ ಮುಂದುವರಿಸಲಾಗಿತ್ತು.

ಕಟ್ಟಡದ ಅವಶೇಷವನ್ನು ಸಂಪೂರ್ಣ ನೆಲಸಮಗೊಳಿಸಿದರೆ ಮಾತ್ರ ಆಹಾರ ಧಾನ್ಯಕ್ಕೆ ಹೊತ್ತಿಕೊಂಡಿರುವ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ನಂದಿಸಬಹುದಾಗಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನರಸಿಂಹಮೂರ್ತಿ ತಿಳಿಸಿದ್ದಾರೆ.
ಅಗ್ನಿಶಾಮಕದ ದಳದ ಕಾರ್ಯಾಚರಣೆ ಸಂಪೂರ್ಣಗೊಂಡಿದೆ. ಕಟ್ಟಡದ ಅಳಿದುಳಿದಿರುವ ಅವಶೇಷವನ್ನು ತೆರವುಗೊಳಿಸಲು ಘಟಕದ ಮಾಲೀಕರು ಕ್ರಮ ಕೈಗೊಂಡಲ್ಲಿ ಒಳ ಭಾಗದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ನಂದಿಸಲು ಸಾಧ್ಯ ಎಂದು ಹೇಳಿದ್ದಾರೆ.

ವಿಮಾ ಕಂಪೆನಿ ಅಧಿಕಾರಿಗಳ ಭೇಟಿ: ಬುಧವಾರ ಮಧ್ಯಾಹ್ನ ಮುಂಬೈನಿಂದ ಆಗಮಿಸಿದ್ದ ಪ್ರಮುಖ ತನಿಖಾಧಿಕಾರಿಯೂ ಒಳಗೊಂಡಂತೆ ಆರು ಜನ ಓರಿಯಂಟಲ್ ಇನ್ಷೂರನ್ಸ್ ಕಂಪೆನಿಯ ಸಿಬ್ಬಂದಿ ಬೆಂಕಿ ಆಕಸ್ಮಿಕ ಸಂಭವಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶೀತಲೀಕರಣ ಘಟಕದ ಕಟ್ಟಡದ ಮೇಲೆ ಒಟ್ಟು 4 ಕೋಟಿ ಹಾಗೂ ಒಳಗೆ ಇರಿಸಲಾದ ಆಹಾರ ಉತ್ಪನ್ನಗಳ ಮೇಲೆ 16 ಕೋಟಿ ಮೌಲ್ಯದ ವಿಮೆ ಮಾಡಿಸಲಾಗಿದ್ದು, ಸಮಗ್ರ ತನಿಖೆ ಮತ್ತು ಪರಿಶೀಲನೆ ನಂತರ ವಿಮಾ ಪರಿಹಾರ ನೀಡಲಾಗುವುದು ಎಂದು ಕಂಪನಿಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಪ್ರಾಥಮಿಕ ವರದಿಗಳ ಅನ್ವಯ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂಬುದು ತಿಳಿದುಬಂದಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ನೀಡುವ ವರದಿಯನ್ನು ಆಧರಿಸಿ ವಿಮೆ ನೀಡಲಾಗುತ್ತದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯವಾಗಿ ಇಂತಹ ಘಟಕಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ವಿಮಾ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗುವ ತನಿಖೆ ಮತ್ತು ಪರಿಶೀಲನಾ ಪ್ರಕ್ರಿಯೆ ಅತ್ಯಂತ ಸುದೀರ್ಘವಾಗಿದ್ದು, ತಕ್ಷಣಕ್ಕೆ ಪರಿಹಾರ ಬಿಡುಗಡೆ ಅಸಾಧ್ಯ. ಆದರೆ, ವಿಮಾ ಪರಿಹಾರ ನೀಡುವುದು ಖಂಡಿತ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಜೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಗಣೇಶ ಗೌಡ ಮತ್ತಿತರ ಅಧಿಕಾರಿಗಳ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.