ADVERTISEMENT

ಅವ್ಯವಸ್ಥೆಯ ಆಗರವಾದ ವಿಠಲಾಪುರ

ಆರ್.ಶಿವರಾಮ ಸಂಡೂರು
Published 11 ಸೆಪ್ಟೆಂಬರ್ 2011, 7:05 IST
Last Updated 11 ಸೆಪ್ಟೆಂಬರ್ 2011, 7:05 IST

ಸಂಡೂರು ತಾಲ್ಲೂಕಿನ ಪಂಚಾಯ್ತಿ ಕೇಂದ್ರವಾಗಿರುವ ವಿಠಲಾಪುರ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದ್ದು ಅರವತ್ತಕ್ಕೂ ಹೆಚ್ಚು ಜನರು ಮಲೇರಿಯಾ ಜ್ವರದಿಂದ ಬಳಲುತ್ತಿದ್ದಾರೆ.

ಸುಮಾರು 3000 ಜನಸಂಖ್ಯೆ ಇರುವ ಗ್ರಾಮದಲ್ಲಿ 1ರಿಂದ 7ನೇ ತರಗತಿಯ ವರೆಗೆ ಪ್ರಾಥಮಿಕ ಶಾಲೆ ಇದೆ. 600 ವಿದ್ಯಾರ್ಥಿಗಳು ಕಲಿಯತ್ತಿರುವ ಶಾಲೆಯಲ್ಲಿ 8 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು 6 ಶಿಕ್ಷಕರ ಕೊರತೆ ಇದೆ. ಶಾಲೆಯ ಸುತ್ತ ತಡೆಗೋಡೆ ನಿರ್ಮಾಣವಾಗದ ಕಾರಣ ಊಟದ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಹಂದಿ, ನಾಯಿಗಳು ತುಂಬ ತೊಂದರೆ ಕೊಡುತ್ತವೆ ಎನ್ನುತ್ತಾರೆ ಇಲ್ಲಿನ ಪೋಷಕರು ಮತ್ತು ಶಿಕ್ಷಕರು.

ಗೋಡೌನ್ ಆದ ಗ್ರಂಥಾಲಯ: ಮಾಜಿ ಸಚಿವ ಎಂ.ವೈ.ಘೋರ್ಪಡೆ ಅವರ ಅನುದಾನದಿಂದ ನಿರ್ಮಾಣವಾಗಬೇಕಿದ್ದ ಗ್ರಂಥಾಲಯದ ಕಟ್ಟಡ ಅರ್ಧಕ್ಕೆ ನಿಂತಿದೆ. ಶಾಸಕರಾಗಿದ್ದ ಸಂತೋಷ್ ಲಾಡ್ ತಮ್ಮ ವೈಯಕ್ತಿಕ ಹಣವನ್ನು ನೀಡಿ ಕಟ್ಟಡದ ಕಾಮಗಾರಿಯನ್ನು ಮುಗಿಸುವಂತೆ ತಿಳಿಸಿದ್ದು ಕೂಡ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯ್ತು ಎನ್ನುತ್ತಾರೆ ಗ್ರಾಮದ ಕೆಲ ವಿದ್ಯಾವಂತ ಯವಕರು.

ಗ್ರಾಮದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ  ಪ್ರಾಯೋಗಿಕ ತರಬೇತಿಗಾಗಿ ವರ್ಕ್ ಶಾಪ್ ಬೇಕೆನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು. ಹಳ್ಳಿಯಲ್ಲಿ ಪಡಿತರ ಚೀಟಿ ಸಿಗದ ಬಡವರೇ ಹೆಚ್ಚಿದ್ದು ತಾಲ್ಲೂಕು ಕೇಂದ್ರಕ್ಕೆ ಅಲೆದು ಅಲೆದು ಸುಸ್ತಾಗಿದ್ದೇವೆ ಎನ್ನುತ್ತಾರೆ ಕೆಲ ಮಹಿಳೆಯರು.

ಆಂಧ್ರದ ಗಡಿಭಾಗದಲ್ಲಿರುವ ಈ ಹಳ್ಳಿಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಾಕಿ ಕೊಳ್ಳುವುದಾಗಿ ಅಧಿಕಾರಿಗಳು ಎರಡು ವರ್ಷದ ಕೆಳಗೆ ಬಂದು ಸಭೆ ನಡೆಸಿ ಹೋಗಿದ್ದರು ಇದುವರೆಗೂ ಯಾವ ಯೋಜನೆಯೂ ಬಂದಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಮಹಂತೇಶ್.

ಮೂರು ವರ್ಷಗಳಾಗುತ್ತಾ ಬಂದಿದ್ದರೂ ಹೊಸದಾಗಿ ಆಯ್ಕೆಯಾದ ಎಂಎಲ್‌ಎ, ಎಂಪಿ ಅವರ ಒಂದು ಪೈಸೆ ಅನುದಾನದ ಹಣ ಗ್ರಾಮಕ್ಕೆ ಸಿಕ್ಕಿಲ್ಲ ಎಂದು ಎಂ.ಸದಾಶಿವ `ಪ್ರಜಾವಾಣಿ~ಗೆ ತಿಳಿಸಿದರು.

ಮಹಿಳೆಯರಿಗೆ ಅಗತ್ಯವಿರುವ ಶೌಚಾಲಯ, ಸೂಕ್ತ ಚರಂಡಿ ವ್ಯವಸ್ಥೆ, ಶಾಲಾ ಕಾಂಪೌಂಡ್ ಹಾಗೂ ಅರ್ಧಕ್ಕೆ ನಿಂತಿರುವ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.