ADVERTISEMENT

‘ಆಹಾರ ಧಾನ್ಯದ ರಫ್ತಿಗೆ ಹಿನ್ನಡೆ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 7:03 IST
Last Updated 29 ನವೆಂಬರ್ 2017, 7:03 IST

ಸಿರುಗುಪ್ಪ: ‘ರೈತರು ಮಿತಿಮೀರಿ ರಾಸಾಯನಿಕ ಔಷಧಿ ಬಳಸುತ್ತಿದ್ದು, ಆಹಾರ ಧಾನ್ಯಗಳಲ್ಲಿ ಹಾನಿಕಾರಕ ಅಂಶ ಸೇರುತ್ತಿರುವುದರಿಂದ ಅಂತರ ರಾಷ್ಟ್ರೀಯ ರಫ್ತು ವಹಿವಾಟಿಗೆ ಹಿನ್ನಡೆ ಆಗುತ್ತಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಮಹಾಂತೇಶ ಬಿ ಪಾಟೀಲ್ ಹೇಳಿದರು.

ತಾಲ್ಲೂಕಿನ ಬಗ್ಗೂರು ಗ್ರಾಮದ ಪ್ರಗತಿಪರ ರೈತ ಸಾಂಬಶಿವರಾವ್‌ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರ ಮಂಗಳವಾರ ಆಯೋಜಿಸಿದ್ದ ನೂತನ ಭತ್ತದ ತಳಿ ಜಗತ್ಯಾಲ ಜೆ.ಜಿ.ಎಲ್-11460 ತಳಿಯ ಕ್ಷೇತ್ರೋತ್ಸವದಲ್ಲಿ ಮಾತನಾಡಿ, 'ಭಾರತದ ಅಕ್ಕಿಯನ್ನು ಅಮೆರಿಕ ಮತ್ತು ಇರಾನ್ ದೇಶ ತಿರಸ್ಕರಿಸುತ್ತಿದೆ. ಐಸೋತಿಲೈನ್ ರಾಸಾಯನಿಕ ಹಾಗೂ ರೋಗನಾಶಕ ಔಷಧಿಯಾದ ಟ್ರೈಸೈಕ್ಲೋಜೈನ್ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿರುವುದರಿಂದ ಈ ಸನ್ನಿವೇಶ ನಿರ್ಮಾಣವಾಗಿದೆ’ ಎಂದರು.

‘ತುಂಗಭದ್ರಾ ನದಿ ನೀರು ಹಾಗೂ ಆಹಾರ ಉತ್ಪನ್ನಗಳು ಸೇವನೆಗೆ ಅಯೋಗ್ಯವಾಗಿವೆ. ನಿಗದಿತ ಪ್ರಮಾಣದಲ್ಲಿ ರೈತರು ಔಷಧಿಗಳನ್ನು ಸಿಂಪಡಿಸಬೇಕು’ ಎಂದು ಸಲಹೆ ನೀಡಿದರು. ‘ಆಂಧ್ರದ ಜಗತ್ಯಾಲ ಕೃಷಿ ಸಂಶೋಧನಾ ಕೇಂದ್ರದ ಜಗತ್ಯಾಲ ಜೆ.ಜಿ.ಎಲ್.11460 ತಳಿಯು ಸೋನಾಮಸೂರಿ ತಳಿಯಂತೆ ಸಣ್ಣ ಗಾತ್ರ ಹೊಂದಿದೆ. ಕೂರಿಗೆ ಮತ್ತು ನಾಟಿ ಭತ್ತದ ವಿಧಾನಕ್ಕೂ ಸೂಕ್ತ’ ಎಂದು ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಸವಣ್ಣೆಪ್ಪ ಹೇಳಿದರು.

ADVERTISEMENT

ಹಗರಿ ಕೃಷಿ ಸಂಶೋಧನಾ ಕೇಂದ್ರದ ಸಸ್ಯರೋಗ ತಜ್ಞ ಡಾ.ಮಹೇಶ್, ‘ಮ್ಯಾಂಕೋಜಬ್ ಹಾಗೂ ಟ್ರೈಸೈಕ್ಲೋಜೈನ್ ಸಂಯುಕ್ತ ಶಿಲೀಂಧ್ರ ನಾಶಕ ಬಳಸಿ ಭತ್ತದ ಬೆಳೆಗೆ ಬೆಂಕಿರೋಗ ಬಾರದಂತೆ ನಿಯಂತ್ರಿಸಬಹುದು’ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಶಿವನಗೌಡ ಪಾಟೀಲ್, ಸಹಾಯಕ ನಿರ್ದೇಶಕ ಪಾಲಾಕ್ಷಿಗೌಡ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗರ್ಜಪ್ಪ, ಕೃಷಿ ವಿಜ್ಞಾನಿಗಳಾದ ಡಾ.ಸಂಗಣ್ಣ ಸಜ್ಜನ್, ಡಾ.ಅಶೋಕ್‌ ಕುಮಾರ್‌ಗಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.