ADVERTISEMENT

ಇಲ್ಲದವರಿಗೆ ಮನೆ ಕೊಡಿ: ಗ್ರಾಮಸ್ಥರ ಆಗ್ರಹ

ಜಿಲ್ಲಾಧಿಕಾರಿಗೆ ಶೀಘ್ರವೇ ವರದಿ ಸಲ್ಲಿಕೆ: ಕಾ.ನಿ. ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 8:55 IST
Last Updated 14 ಡಿಸೆಂಬರ್ 2012, 8:55 IST

ಕುರುಗೋಡು: ತಾಲ್ಲೂಕು ಪಂಚಾಯಿತಿ  ಕಾರ್ಯ ನಿರ್ವಾಹಕ ರಾಧಾಕೃಷ್ಣ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕ ಸಭೆಯಲ್ಲಿ ಆಶ್ರಯ ಮನೆ ಮತ್ತು ಶೌಚಾಲಯ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದರು.

ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾ.ಪಂ.ನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದೆ ಹಣ ಪಾವತಿಯಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಗುರುವಾರ ಈ ಸಭೆ ನಡೆಯಿತು. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ರಾಧಾಕೃಷ್ಣ ರೆಡ್ಡಿ ಹೇಳಿದರು.

ಸಭೆಯಲ್ಲಿ ಮಾತನಾಡಿದ ಗ್ರಾಮದ ಮಹೇಶ ಮತ್ತು ಈಶ್ವರಪ್ಪ “ಗ್ರಾಮದಲ್ಲಿ ಶ್ರೀಮಂತರಿಗೆ ಆಶ್ರಯ ಮನೆಗಳನ್ನು ನೀಡಲಾಗುತ್ತಿದೆ. ಮನೆ ಇಲ್ಲದ ನಮಗೆ ಆಶ್ರಯ ಯೋಜನೆಯಡಿ ಒಂದು ಮನೆಯನ್ನಾದರೂ ಕೊಡಿರಿ” ಎಂದು ಮನವಿ ಮಾಡಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು ವರ್ಷಗಳಿಂದ ಗ್ರಂಥಾಲಯಕ್ಕೆ ಸ್ಥಳ ನಿಗದಿಯಾಗಿದ್ದರೂ ಕಟ್ಟಡ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಈ ಬಗ್ಗೆ ವಿಚಾರಣೆ ನಡೆಸಿದ ಇ.ಒ. ಕಟ್ಟಡ ನಿರ್ಮಾಣಕ್ಕೆ  ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ನಂತರ ಗ್ರಾಮದಲ್ಲಿ ನಡೆದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಯಿತು. ಗ್ರಾಮದಲ್ಲಿ ನಡೆದ ಚರಂಡಿ ಮತ್ತು ಬಾವಿಯಲ್ಲಿ ಹೂಳು ತೆಗೆಸಿದ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.

ನಂತರ ಮಾತನಾಡಿದ ಇ.ಒ. ರಾಧಾಕೃಷ್ಣರೆಡ್ಡಿ, ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ. ಅದೇ ರೀತಿ ಕಾಮಗಾರಿಗಳನ್ನು ವೀಕ್ಷಿಸಿದ್ದು, ವರದಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿ.ಪಂ. ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.