ADVERTISEMENT

ಇಸ್ಪಾತ್ ಕಂಪೆನಿ ಅಕ್ರಮ ಜಮೀನು ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2012, 6:10 IST
Last Updated 12 ಮೇ 2012, 6:10 IST

ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ 26.81 ಎಕರೆ ಸರ್ಕಾರಿ ಭೂಮಿಯನ್ನು ಬಿಎಂಎಂ ಇಸ್ಪಾತ್ ಕಂಪೆನಿಯು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣವೇ ವಾಪಸ್ ಪಡೆಯುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.


ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿದ ಕಾರ್ಯಕರ್ತರು, ಅತಿಕ್ರಮಣ ಪ್ರದೇಶ ವಾಪಸ್ ಪಡೆಯಲು ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಸರ್ವೆ ನಂ. 29ಸಿ ಗೆ ಸೇರಿದ 26.81 ಎಕರೆ ಭೂಮಿ ತಮಗೆ ಬೇಕು ಎಂದು 2006ರಲ್ಲಿ ಮನವಿ ಸಲ್ಲಿಸಿದೆ. ಆದರೆ ಇದುವರೆಗೂ ಭೂಮಿಯನ್ನು ಸರ್ಕಾರ ಕಾರ್ಖಾನೆಗೆ ನೀಡಿಲ್ಲ. ಕಾರ್ಖಾನೆ ಆಡಳಿತ ಮಂಡಳಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಪಿಲೆಟ್ ಪ್ಲಾಂಟ್ ನಿರ್ಮಿಸಿ ಕಾರ್ಯಾರಂಭ ಮಾಡಿದೆ. ಇದನ್ನು ಪರಿಶೀಲಿಸಿದ ತಹಶೀಲ್ದಾರರು ಅಕ್ರಮ ನಿರ್ಮಾಣವನ್ನು ಖಚಿತಪಡಿಸಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಪ್ರತಿಭಟನಾಕಾರರು ವಿವರಿಸಿದರು.

ಬೇಡಿಕೆಗಳು: ಸರ್ಕಾರಿ ಭೂಮಿಯಲ್ಲಿರುವ ಕೈಗಾರಿಕಾ ಘಟಕ ತೆರವುಗೊಳಿಸಬೇಕು. ಅಕ್ರಮ ನಿರ್ಮಾಣ ಹಾಗೂ ಸ್ವಾಧೀನ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಾರ್ಖಾನೆ ತ್ಯಾಜ್ಯವನ್ನು ತುಂಗಭದ್ರಾ ಜಲಾಶಯಕ್ಕೆ ಬಿಡುವುದನ್ನು ತಡೆಯಬೇಕು. ಡಣಾಪುರದ ಸರ್ಕಾರಿ ಕಲ್ಲು ಬಂಡೆಯಿರುವ ಜಮೀನನ್ನು ಯಾವುದೇ ಕಾರಣಕ್ಕೂ ಕಾರ್ಖಾನೆಗೆ ನೀಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘಟನೆ ಮುಖಂಡರಾದ ಕಟಗಿ ರಾಮಕೃಷ್ಣ, ಕೆ.ರಾಮಪ್ಪ, ವಿ. ಪರಶುರಾಮ, ಕಟಗಿ ಜಂಬಯ್ಯನಾಯಕ, ರಜೀಯಾಬೇಗಂ, ಗೀತಾಶಂಕರ್, ಪಾಂಡು, ಸೋಮಶೇಖರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT