ADVERTISEMENT

ಈದ್ ಸಡಗರಕ್ಕೆ ಸಲೂನ್‌ ಜಾಗರಣೆ!

ಹಬ್ಬಕ್ಕೆ ಟ್ರಿಮ್ ಆಗುವ ಕಾತರ, ಅಲಂಕಾರದತ್ತ ಗಮನ: ಸಲೂನ್‌ ಸಿಬ್ಬಂದಿಗೆ ರಾತ್ರಿಯಿಡೀ ಕೆಲಸ

ಕೆ.ನರಸಿಂಹ ಮೂರ್ತಿ
Published 16 ಜೂನ್ 2018, 5:43 IST
Last Updated 16 ಜೂನ್ 2018, 5:43 IST
ಬಳ್ಳಾರಿಯ ರೇಡಿಯೋ ಪಾರ್ಕ್‌ ಪ್ರದೇಶದ ಸಲೂನಿನಲ್ಲಿ ಶುಕ್ರವಾರ ಸಂಜೆ ಬಿಡುವಿಲ್ಲದ ಕೇಶ ವಿನ್ಯಾಸದ ಕಾಯಕ. ತಮ್ಮ ಸರದಿಗಾಗಿ ಕಾಯುತ್ತಿದ್ದ ಮುಸ್ಲಿಮರು
ಬಳ್ಳಾರಿಯ ರೇಡಿಯೋ ಪಾರ್ಕ್‌ ಪ್ರದೇಶದ ಸಲೂನಿನಲ್ಲಿ ಶುಕ್ರವಾರ ಸಂಜೆ ಬಿಡುವಿಲ್ಲದ ಕೇಶ ವಿನ್ಯಾಸದ ಕಾಯಕ. ತಮ್ಮ ಸರದಿಗಾಗಿ ಕಾಯುತ್ತಿದ್ದ ಮುಸ್ಲಿಮರು   

ಬಳ್ಳಾರಿ: ತಿಂಗಳ ಉಪವಾಸ ವ್ರತ ಮುಗಿಸಿದ ಮುಸ್ಲಿಮರ ಈದ್ ಸಂಭ್ರಮಕ್ಕಾಗಿ ನಗರದ ಹೇರ್ಕಟಿಂಗ್‌ ಸಲೂನ್‌ಗಳ ಸಿಬ್ಬಂದಿ ಜಾಗರಣೆ! ಇದು ಈ ನಗರವೊಂದರ ಕತೆ ಅಲ್ಲ. ರಮ್ಜಾನ್‌‌ ಆಚರಿಸುವ ಎಲ್ಲ ಪ್ರದೇಶಗಳ ಕತೆ. ಹೌದು. ಸಲೂನ್‌ ಮಾಲೀಕರಿಗೆ ಮತ್ತು ಸಿಬ್ಬಂದಿಗೆ ಪ್ರತಿ ವರ್ಷವೂ ರಮ್ಜಾನ್‌‌ ಹಬ್ಬದ ಹಿಂದಿನ ದಿನ ಹಗಲು–ರಾತ್ರಿ ಬಿಡುವಿಲ್ಲದ ಕಾಯಕ. ಅದಕ್ಕೆ ಅವರಿಗೇನೂ ಬೇಸರವಿಲ್ಲ. ದುಡಿಮೆಗೆ ಅವಕಾಶ ಸಿಕ್ಕಷ್ಟೂ ಖುಷಿ.

ಮೂವತ್ತು ದಿನ ರಮ್ಜಾನ್‌‌ ಉಪವಾಸ ವ್ರತ ಆಚರಿಸುವ ಸಂದರ್ಭದಲ್ಲಿ ತಮ್ಮ ಕೇಶ ವಿನ್ಯಾಸ, ಅಲಂಕಾರದ ಬಗ್ಗೆ ಪುರುಷರು ಹೆಚ್ಚೇನೂ ಗಮನ ಹರಿಸುವುದಿಲ್ಲ. ಬಹಳಷ್ಟು ಮಂದಿ ಇಡೀ ತಿಂಗಳು ಹೇರ್‌ ಕಟ್‌ ಮತ್ತು ಗಡ್ಡ ಶೇವಿಂಗ್‌ ಅನ್ನು ತ್ಯಜಿಸುತ್ತಾರೆ.

ಪ್ರತಿ ದಿನವೂ ಐದು ಬಾರಿ ನಮಾಜು ಮಾಡುವುದು, ಬೆಳಗಿನ ಜಾವವೇ ಏಳುವುದು, ಸಂಜೆ ಉಪವಾಸ ಮುರಿಯುವುದು, ಆ ಬಳಿಕವೂ ಎರಡು ಬಾರಿ ನಮಾಜು ಮಾಡುವುದು– ಈ ದಿನಚರಿಯಲ್ಲಿ ಅವರಿಗೆ ಸಲೂನು ಕಡೆಗೆ ಹೋಗಬೇಕೆನಿಸಿದರೂ, ಹೋಗಲು
ಆಗುವುದಿಲ್ಲ. ಹೀಗಾಗಿಯೇ ಹಬ್ಬದ ಹಿಂದಿನ ದಿನ ಸಲೂನುಗಳಲ್ಲಿ ಜನಜಂಗುಳಿ ನೆರೆಯುತ್ತದೆ.

ADVERTISEMENT

‘ಗಡ್ಡ ಶೇವಿಂಗ್‌, ಹೇರ್‌ ಕಟಿಂಗ್‌, ತಲೆ ಕೂದಲಿಗೆ ಬಣ್ಣ ಹಾಕಿಸಿಕೊಳ್ಳುವುದು, ಮುಖಕ್ಕೆ ಮಸಾಜು, ಫೇಶಿಯಲ್‌ಗೆ ಬೇಡಿಕೆ ಹೆಚ್ಚು. ನಾವು ಹಬ್ಬದ ಹಿಂದಿನ ದಿನ ಮತ್ತು ರಾತ್ರಿಯಿಡೀ ಅಂಗಡಿ ತೆರೆದಿರುತ್ತೇವೆ. ಜನ ಬರುತ್ತಲೇ ಇರುತ್ತಾರೆ’ ಎಂದು ನಗರದ ಎಪಿಎಂಸಿ ಮಾರುಕಟ್ಟೆ ರಸ್ತೆಯ ಮಾರುತಿ ಸಲೂನ್‌ ಮಾಲೀಕ ನಾರಾಯಣ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ಮಧ್ಯಾಹ್ನ 1ರ ವೇಳೆಗೆ ಅವರ ಅಂಗಡಿಗೆ ಭೇಟಿ ನೀಡಿದ ಸಮಯದಲ್ಲಿ ಅವರೂ ಸೇರಿ ನಾಲ್ವರು ಸಿಬ್ಬಂದಿ ಆಗಷ್ಟೇ ಬೆಳಗಿನ ಉಪಾಹಾರ ಸೇವಿಸಿದ್ದರು. ಏಕೆಂದರೆ, ಅವರಿಗೆ ಕೆಲಸದಿಂದ ಬಿಡುವು ದೊರೆತಿರಲಿಲ್ಲ.

‘ಬಂಡಿಮೋಟು, ಕಾಕರ್ಲ ತೋಟ, ಗುಗ್ಗರಹಟ್ಟಿ ಸುತ್ತಮುತ್ತಲಿನ ನೂರಾರು ಮಂದಿ ಇಂದು ಬರುತ್ತಾರೆ. ಈ ರಸ್ತೆಯಲ್ಲಿ ಸುಮಾರು ಹತ್ತು ಸಲೂನುಗಳಿವೆ. ಎಲ್ಲರೂ ರಾತ್ರಿಯಿಡೀ ತೆರೆದಿರುತ್ತವೆ. ನಾಳೆ ನಾವು ರಜೆ ಮಾಡುತ್ತೇವೆ’ ಎಂದು ಅವರು ಕೆಲಸದಲ್ಲಿ ನಿರತರಾದರು.

’ಸಂಜೆ ಬಂದರೆ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಏಕೆಂದರೆ ಕೊನೇ ದಿನದ ಉಪವಾಸ ಮುಗಿಸಿದ ಬಳಿಕ ಹಲವರು ಮತ್ತೆ ನಮಾಜಿಗೆ ಹೋಗದೆ ಸಲೂನುಗಳ ಕಡೆಗೆ ಬಂದು ಬಿಡುತ್ತಾರೆ. ಹೀಗಾಗಿ ನಾನು ಮಧ್ಯಾಹ್ನವೇ ಬಂದಿರುವೆ’ ಎಂದು ಅಲ್ಲೇ ಇದ್ದ ಗುಗ್ಗರ ಹಟ್ಟಿಯ ರಿಜ್ವಾನ್‌ ತಿಳಿಸಿದರು. ಅವರು ತಮ್ಮ ಹೇರ್‌ ಕಟಿಂಗ್‌ ಮತ್ತು ಶೇವಿಂಗ್‌ಗಾಗಿ ಸುಮಾರು ಒಂದು ಗಂಟೆ ಕಾಲ ಕಾದಿದ್ದರು!

‘ಉಪವಾಸವಿದ್ದಾಗ ನಾವು ನಮ್ಮ ತಲೆಕೂದಲು, ಗಡ್ಡದ ಕಡೆ ಗಮನ ಕೊಡಲು ಆಗುವುದಿಲ್ಲ. ಯಾರೋ ಕೆಲವರು ಮಾತ್ರ ಆಗಾಗ ಹೇರ್‌ ಕಟ್‌ ಮಾಡಿಸುತ್ತಾರೆ. ಬಹುತೇಕರು ಉಪವಾಸದ ಬಳಿಕವೇ ಬರುತ್ತಾರೆ’ ಎಂದರು.

ತಡರಾತ್ರಿವರೆಗೆ ಖರೀದಿ ಸಂಭ್ರಮ

ಬಳ್ಳಾರಿ: ಈದ್ ಉಲ್ ಫಿತ್ರ್ ಹಬ್ಬದಲ್ಲಿ ಮಹಿಳೆಯರ ಸಡಗರ–ಸಂಭ್ರಮವೂ ವಿಶೇಷವಾಗಿ ಹೊಳೆಯಿತು. ಹಬ್ಬಕ್ಕೆ ಒಂದೆರಡು ದಿನ ಮುಂಚೆಯಿಂದಲೇ ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ಬಟ್ಟೆ, ಅಲಂಕಾರ ಸಾಮಗ್ರಿಗಳ ಖರೀದಿಗೆ ತೊಡಗಿದ್ದರು.

ನಗರದ ಮಾರುಕಟ್ಟೆ ಪ್ರದೇಶಗಳು, ಅಂಗಡಿಗಳು ದೀಪಾಲಂಕಾರದಿಂದ ಕಂಗೊಳಿಸಿದವು. ಹಬ್ಬದ ಹಿಂದಿನ ದಿನವಾದ ಶುಕ್ರವಾರ ಮಧ್ಯರಾತ್ರಿಯವರೆಗೂ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.