ಕಂಪ್ಲಿ: ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಕನ್ನಾರಿ ತಿಳಿಸಿದರು.
87.5 ಮಿ.ಮೀ.ನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಸಾಲಿನಲ್ಲಿ ಈಗಾಗಲೇ 117 ಮಿ.ಮೀ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಭೂಮಿ ಹದ ಮಾಡಿದ್ದರೆ ಇನ್ನು ಕೆಲವಡೆ ಬಿತ್ತನೆಯೂ ಆಗಿದೆ ಎಂದು ನಂ.10 ಮುದ್ದಾಪುರ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದರು.
ಮುಂಗಾರು ಬಿತ್ತನೆಗಾಗಿ ಜೋಳ, ಸಜ್ಜೆ, ಮೆಕ್ಕೆ ಜೋಳ, ಬತ್ತ, ತೊಗರಿ, ಸೂರ‌್ಯಕಾಂತಿ ಬಿತ್ತನೆ ಬೀಜಗಳನ್ನು ರಿಯಾಯ್ತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಪೂರೈಸಲಾಗುತ್ತಿದೆ. ಬೀಜೋಪಚಾರಕ್ಕೆ ಔಷಧಿ, ಲಘು ಪೋಷಕಾಂಶಗಳಾದ ಬೋರಾನ್, ಜಿಪ್ಸಂ, ಸತುವಿನ ಸಲ್ಫೇಟ್ ದಾಸ್ತಾನು ಇದೆ. ಜೊತೆಗೆ 20,385 ಟನ್ ಇಫ್ಕೋ ಗೊಬ್ಬರ ಸೇರಿ ಅಗತ್ಯ ರಸಗೊಬ್ಬರಗಳ ದಾಸ್ತಾನು ಇದ್ದು, ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಜೋಳ 12 ಕ್ವಿಂಟಲ್, ಮೆಕ್ಕೆ ಜೋಳ 420 ಕ್ವಿಂ, ತೊಗರಿ 6 ಕ್ವಿಂ, ಸಜ್ಜೆ 20 ಕ್ವಿಂ, ಸೂರ‌್ಯಕಾಂತಿ 5 ಕ್ವಿಂ ಬಿತ್ತನೆ ಬೀಜದ ಬೇಡಿಕೆ ಇದೆ. ಸದ್ಯ ಶೇ. 30ರಷ್ಟು ದಾಸ್ತಾನು ಇದೆ. ಸಂಗ್ರಹಣೆಗೆ ಗೋದಾಮು ಕೊರತೆ ಕಾರಣ ಹಂತ ಹಂತವಾಗಿ ಇನ್ನುಳಿದ ಶೇ. 70ರಷ್ಟು ಬಿತ್ತನೆ ಬೀಜಗಳನ್ನು ತರಿಸಿಕೊಂಡು ರೈತರಿಗೆ ವಿತರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.