ADVERTISEMENT

ಉದ್ಘಾಟನೆಯಾದರೂ ಆರಂಭವಾಗದ ಜಿಲ್ಲಾ ಆಸ್ಪತ್ರೆ

ಸಿದ್ದಯ್ಯ ಹಿರೇಮಠ
Published 20 ಫೆಬ್ರುವರಿ 2012, 6:15 IST
Last Updated 20 ಫೆಬ್ರುವರಿ 2012, 6:15 IST

ಬಳ್ಳಾರಿ: ಜರ್ಮನಿ ದೇಶದ ಭಾರಿ ಪ್ರಮಾಣದ ಅನುದಾನದ ನೆರವಿನೊಂದಿಗೆ ವಿನೂತನ ರೂಪ ಪಡೆದಿರುವ, ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿನ ಜಿಲ್ಲಾ ಆಸ್ಪತ್ರೆ ಉದ್ಘಾಟನೆಗೊಂಡು ಆರು ತಿಂಗಳು ಪೂರ್ಣಗೊಂಡರೂ ಕಾರ್ಯಾರಂಭ ಮಾಡದ್ದರಿಂದ ಸಾರ್ವಜನಿಕರು ಆರೋಗ್ಯ ಸೇವೆ ಲಭಿಸದೆ ಪರದಾಡುವಂತಾಗಿದೆ.

ವಿನೂತನ ಕಟ್ಟಡ ನಿರ್ಮಾಣಕ್ಕೆ 14 ಕೋಟಿ, ವೈದ್ಯಕೀಯ ಸಲಕರಣೆಗಳಿಗೆ 1.4 ಕೋಟಿ ಸೇರಿದಂತೆ ಒಟ್ಟು 15.4 ಕೋಟಿ ಅನುದಾನ ನೀಡಿರುವ ಜರ್ಮನಿ ದೇಶದ ನಿಯೋಗ ಇತ್ತೀಚೆಗಷ್ಟೇ ನಗರಕ್ಕೆ ಭೇಟಿ ನೀಡಿ ಆಸ್ಪತ್ರೆ ಕಾರ್ಯಾರಂಭ ಮಾಡದಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಈ ರೀತಿಯ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಹಿಂದಿರುಗಿದೆ.

2011ರ ಆಗಸ್ಟ್ 12ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರರು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿದ್ದರು. ಆಸ್ಪತ್ರೆಗಾಗಿಯೇ ಕ್ಷ-ಕಿರಣ, ಸ್ಕ್ಯಾನಿಂಗ್, ವೆಂಟಿಲೇಟರ್ ಮತ್ತಿತರ ಸಲಕರಣೆಗಳನ್ನು ರೂ 1.4 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದ್ದು, ಸದ್ಯ ಅವೆಲ್ಲವುಗಳನ್ನೂ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿರುವ ಈ ಆಸ್ಪತ್ರೆಯ ಜವಾಬ್ದಾರಿ ವಿಮ್ಸ ಅಧೀನದಲ್ಲಿದ್ದು, ಸಿಬ್ಬಂದಿ ನೇಮಕಾತಿ ವಿಳಂಬದಿಂದಾಗಿ ಹೊಸ ಕಟ್ಟಡವಿದ್ದರೂ ಜನರ ಸೇವೆಗೆ ದೊರೆಯದಂತಾಗಿದೆ.

60 ಜನ ವೈದ್ಯಕೀಯ ಸಿಬ್ಬಂದಿ ಸೇರಿದಂತೆ, ಸ್ಟಾಫ್ ನರ್ಸ್, ಗ್ರೂಪ್ `ಸಿ~ ಹಾಗೂ ಗ್ರೂಪ್ `ಡಿ~ ಮತ್ತಿತರ 198 ಹುದ್ದೆಗಳನ್ನು ಭರ್ತಿ ಮಾಡುವಂತೆ, ಎರಡು ವರ್ಷಗಳ ಹಿಂದೆ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾದಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೂ ನೇಮಕಾತಿ ಪ್ರಕ್ರಿಯೆ ನಡೆಯದ್ದರಿಂದ ಹೊಸ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸುವುದು ಸಾಧ್ಯವಾಗಿಲ್ಲ. ಹಣಕಾಸು ಇಲಾಖೆಯ ಅನುಮೋದನೆ ದೊರೆಯುತ್ತಿಲ್ಲ ಎಂದು ವಿಮ್ಸ ನಿರ್ದೇಶಕ ಡಾ.ಬಿ. ದೇವಾನಂದ್ `ಪ್ರಜಾವಾಣಿ~ ಎದುರು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಆಸ್ಪತ್ರೆ ಆರಂಭವಾಗಿದ್ದೇ ಆದರೆ, ವಿಮ್ಸನ ವೈದ್ಯಕೀಯ ಕಾಲೇಜಿನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಇನ್ನೂ 50ಕ್ಕೆ ಹೆಚ್ಚಿಸಲು ಸಹಾಯಕಾರಿ ಆಗುತ್ತದೆ. ಆದರೆ, ಇಲಾಖೆ ಈವರೆಗೂ ನೇಮಕಾತಿಗೆ ಕ್ರಮ ಕೈಗೊಳ್ಳದಿರುವುದರಿಂದ ಆ ಆಸೆ ಕೈಗೂಡದೆ ಉಳಿಯುವಂತಾಗಿದೆ ಎಂಬುದು ಅವರ ಅಭಿಪ್ರಾಯ.

ಭಾಗಶಃ ಆರಂಭ: ಎರಡು ವಾರಗಳ ಹಿಂದಷ್ಟೇ ವಿಮ್ಸನ ಐದಾರು ಜನ ಸಿಬ್ಬಂದಿಯನ್ನು ಸರದಿ ಪ್ರಕಾರ ಈ ಆಸ್ಪತ್ರೆಗೆ ನಿಯೋಜಿಸಿ ಹೊರ ರೋಗಿಗಳ ವಿಭಾಗವನ್ನು ಆರಂಭಿಸಲಾಗಿದೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ನಂತರ 2ರಿಂದ 4ರವರೆಗೆ ಈ ವಿಭಾಗದಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಜ್ವರ, ಕೆಮ್ಮು, ನೆಗಡಿ, ತಲೆನೋವು ಮತ್ತಿತರ ಕಾಯಿಲೆಗಳಿಗೆ ತಾತ್ಪೂರ್ತಿಕ ಚಿಕಿತ್ಸೆ ನೀಡುತ್ತಿದ್ದಾರೆ.

ಆದರೆ, 150 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಪ್ರತಿ ಮೂರು ಹಾಸಿಗೆಗೆ ಒಬ್ಬರಂತೆ ಸ್ಟಾಫ ನರ್ಸ್ ನೇಮಕ ಮಾಡಿಕೊಂಡು, ಶಸ್ತ್ರಚಿಕಿತ್ಸಕರೂ ಒಳಗೊಂಡಂತೆ 60 ಜನ ತಜ್ಞ ವೈದ್ಯರನ್ನು ನೇಮಿಸಿಕೊಳ್ಳುವಂತೆ ಕೋರಲಾಗಿದೆ ಎಂದು ಅವರು ಹೇಳುತ್ತಾರೆ.

ಮುಖ್ಯವಾಗಿ ಹೆರಿಗೆ, ಡೆಂಗೆ, ಮಲೇರಿಯಾ, ಚಿಕ್ಕಪುಟ್ಟ ಅಪಘಾತ, ಸಾಮಾನ್ಯ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ನೀಡಬಹುದಾಗಿದ್ದು, ಇದೀಗ ವಿಮ್ಸನಲ್ಲೇ ಈ ಕುರಿತ ಚಿಕಿತ್ಸೆಗೂ ಜನ ಬರುತ್ತಿರುವುದರಿಂದ ಸಾಕಷ್ಟು ಗದ್ದಲ ಉಂಟಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.

ಆರೋಗ್ಯ ಇಲಾಖೆಗೆ ನೀಡಿ: ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಕಾರ್ಯಾರಂಭ ಮಾಡದ ಆಸ್ಪತ್ರೆಯ ಸದ್ಯದ ಸ್ಥಿತಿ ಕಂಡು, ಅನುದಾನ ನೀಡಿದ ಜರ್ಮನಿಯ ನಿಯೋಗವು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಈ ಕುರಿತು ವಿವರಣೆ ನೀಡಿ, ಆಸ್ಪತ್ರೆ ನಿರ್ವಹಣೆ ಜವಾಬ್ದಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಹೇಳುತ್ತಾರೆ.

ಗ್ರಾಮೀಣ ಪ್ರದೇಶದ ಹಾಗೂ ನಗರದ ನಿವಾಸಿಗಳು ಸಣ್ಣ ಪುಟ್ಟ ಕಾಯಿಲೆ ಹಾಗೂ ಹೆರಿಗೆ ಮತ್ತಿತರ ತರ್ತು ಸಂದರ್ಭ ಚಿಕಿತ್ಸೆ ಪಡೆಯಲು ವಿಮ್ಸ ಆಸ್ಪತ್ರೆಗೆ ಹೋಗಿ ತೀವ್ರ ತೊಂದರೆ ಎದುರಿಸುತ್ತಿದ್ದು, ಅವರೆಲ್ಲರಿಗೂ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರೆತಲ್ಲಿ ಅನುಕೂಲವಾಗುತ್ತದೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಯ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು. ಇಲ್ಲವೆ, ವೈದ್ಯಕೀಯ ಶಿಕ್ಷಣ ಇಲಾಖೆ ಆದಷ್ಟು ಬೇಗ ಸಿಬ್ಬಂದಿ ನೇಮಕ ಮಾಡಿಕೊಂಡು ಜನರ ಸಮಸ್ಯೆ ನೀಗಿಸಬೇಕು ಎಂದು ಅವರು ಹೇಳುತ್ತಾರೆ.

ವಿಮ್ಸನಲ್ಲಿರುವ ದೊಡ್ಡ ಆಸ್ಪತ್ರೆಯಲ್ಲಿ ನಿತ್ಯವೂ ರೋಗಿಗಳ ಸಂಖ್ಯೆ ಸಾವಿರಾರು ಇರುತ್ತದೆ. ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಗೆ ಅನೇಕರು ಎಡತಾಕುತ್ತಾರೆ. ಅಲ್ಲದೆ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ನೆರೆಯ ಆಂಧ್ರದ ರಾಯದುರ್ಗ, ಆದೋನಿ ಮತ್ತಿತರ ಭಾಗದಿಂದಲೂ ರೋಗಿಗಳು ಚಿಕಿತ್ಸೆಗಾಗಿ ಧಾವಿಸುತ್ತಾರೆ.
 
ಜತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿರುವ ರೋಗಿಗಳೂ ವಿಮ್ಸಗೇ ತೆರಳುವುದರಿಂದ ನೂಕುನುಗ್ಗಲು ಹೆಚ್ಚಿ ಸೂಕ್ತ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಜಿಲ್ಲಾ ಆಸ್ಪತ್ರೆ ಆರಂಭಿಸಿದರೆ ಬಳ್ಳಾರಿ ನಗರದ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರ ಸಮಸ್ಯೆ ನೀಗಿಸಬೇಕು ಎಂದು ನಾಗರಿಕ ಹೋರಾಟ ಸಮಿತಿಯ ಬಿ.ಹೇಮನಗೌಡ ಕೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.