ADVERTISEMENT

ಉನ್ನತ ಗುರಿ: ಸಾಧನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 5:40 IST
Last Updated 19 ಏಪ್ರಿಲ್ 2012, 5:40 IST

ಬಳ್ಳಾರಿ: ಯುವತಿಯರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಗುರಿಯನ್ನು ಹೊಂದುವ ಮೂಲಕ, ಸಾಧನೆಗೆ ಶ್ರಮಿಸಬೇಕು ಎಂದು ವಿಜಾಪುರದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಮೀನಾ ಚಂದಾವರಕರ್ ಸಲಹೆ ನೀಡಿದರು.

ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಪದವಿ ಪಡೆದ ನಂತರ ಕೆಲಸಕ್ಕಾಗಿ ಹುಡುಕಾಟ ಪ್ರಾರಂಭಿಸದೆ, ವ್ಯಾಸಂಗದ ವೇಳೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಂಡಿರಬೇಕು ಎಂದು ಅವರು ತಿಳಿಸಿದರು.
ಮಹಿಳೆ ಸ್ವಾವಲಂಬಿಯಾದರೆ ಸಮಾಜಕ್ಕೂ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ, ಕಾಲೇಜನ್ನು ಅಭಿವೃದ್ಧಿಗೊಳಿಸಿ, ಮೂಲ ಸೌಲಭ್ಯ ಕಲ್ಪಿಸಲು ಸಂಘ ಸದಾ ಆಸಕ್ತಿ ಹೊಂದಿದೆ. ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವೀ.ವಿ. ಸಂಘದ ಕೆ.ಎಂ. ಮಹೇಶ್ವರಸ್ವಾಮಿ, ಗುರುಸಿದ್ಧಸ್ವಾಮಿ, ಜೆ.ಎಸ್. ನೇಪಾಕ್ಷಪ್ಪ, ಸಂಗನಕಲ್ಲು ಹಿಮಂತ ರಾಜ್, ಕಾತ್ಯಾಯನಿ ಮರಿದೇವಯ್ಯ, ಜೆ.ಎಸ್.ಸುಮಂಗಳಮ್ಮ, ಡಾ.ರೇಣುಕಾ  ಮಂಜುನಾಥ, ಸ್ವರ್ಣಲತಾ ಗಡಗಿ, ಅಂಗಡಿ ಶಶಿಕಲಾ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಾಚಾಯ ಡಾ.ಕೆ. ತೇಜಸ್ ಮೂರ್ತಿ ವಾರ್ಷಿಕ ವರದಿ ಮಂಡಿಸಿದರು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್. ನಾಗರಾಜ ಸ್ವಾಗತಿಸಿ, ವಂದಿಸಿದರು.
ನಂತರ ಕಾಲೇಜಿನ ವಿದ್ಯಾರ್ಥಿನಿ ಯರಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.