ADVERTISEMENT

ಎಸ್ಮಾ ಕಾಯ್ದೆ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 6:20 IST
Last Updated 21 ಸೆಪ್ಟೆಂಬರ್ 2013, 6:20 IST

ಬಳ್ಳಾರಿ: ಕಾರ್ಮಿಕರ ನ್ಯಾಯಯುತ ಹೋರಾಟ ಹಾಗೂ ಮುಷ್ಕರಕ್ಕೆ ಅಡ್ಡಿ ಉಂಟುಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (ಎಸ್ಮಾ) ವಿರೋಧಿಸಿ, ವಿವಿಧ ಕಾರ್ಮಿಕ ಸಂಘಟನೆಗಳ  ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಯುನಿಯನ್‌ (ಸಿಐಟಿಯು) ಹಾಗೂ ಆಟೋ ರಿಕ್ಷಾ ಚಾಲಕರ ಸಂಘಗಳ ಒಕ್ಕೂಟ, ಬಿಟಿಪಿಎಸ್ ಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣ­ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 4 ತಿಂಗಳ ಅವಧಿಯಲ್ಲಿ ಕಾರ್ಮಿಕರ ಪರ ಯಾವುದೇ ನಿರ್ಧಾರ  ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ದೂರಿದರು. ಕಾರ್ಮಿಕರಿಗೆ ಸಮಾನ ವೇತನ, ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸುವ ಕಾಯ್ದೆ ರೂಪಿಸುವುದಲ್ಲದೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯೋಜನೆ ರೂಪಿಸಿ,

ಫಲಾನುಭವಿಗಳನ್ನು ನೋಂದಾಯಿ­ಸುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಬೀದಿಬದಿಯ  ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರು ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಗೆ ಮತ್ತು ವಿಮಾ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಿ, ಚಾತಕ ಪಕ್ಷಿಗಳಂತೆ ಕಾಯುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರಗಳ ಖಾಸಗೀಕರಣ, ಮದ್ಯಾಹ್ನದ ಬಿಸಿಯೂಟ ಯೋಜನೆಯ ಹೊರ ಗುತ್ತಿಗೆಗೆ ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ. ಆಶಾ ಕಾರ್ಯಕರ್ತರಿಗೆ ಹಾಗೂ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳಿಗೆ ನಿಗದಿತ ಸಮಯಕ್ಕೆ ಕನಿಷ್ಠ ವೇತನ ನೀಡದೆ, ಸತಾಯಿಸಲಾಗುತ್ತಿದೆ. ಇದರಿಂದಾಗಿ ಕಾರ್ಮಿಕರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.

ಎಸ್ಮಾ ಜಾರಿಯಿಂದ ಹಿಂದೆ ಸರಿಯಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ ₨ 10 ಸಾವಿರ ವೇತನ ನಿಗದಿಪಡಿಸಬೇಕು, ಮದ್ಯಾಹ್ನದ ಬಿಸಿಯೂಟದ ಖಾಸಗೀಕರಣ ನಿಲ್ಲಿಸಬೇಕು, ಹಾಲು, ಕುಡಿಯುವ ನೀರು ಹಾಗೂ ಬಸ್‌ ಪ್ರಯಾಣ ದರ ಕಡಿಮೆ ಮಾಡಬೇಕು, ಹೊರಗುತ್ತಿಗೆ ಪದ್ದತಿ ರದ್ದುಗೊಳಿಸಬೇಕು, ಎಪಿಎಲ್‌ ಕುಟುಂಬಗಳಿಗೂ ಪಡಿತರ ಆಹಾರ ಧಾನ್ಯ ವಿತರಿಸಬೇಕು ಎಂದು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಬಸವರಾಜ್‌, ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಕೆ.ನಾಗರತ್ನಮ್ಮ, ಎರ್ರೆಮ್ಮ, ಆಟೋ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೈಲಾಸಮೂರ್ತಿ, ಕಾರ್ಯದರ್ಶಿ ಕೆ.ಎಂ. ಸಂತೋಷ, ಉಪಾಧ್ಯಕ್ಷ ಟಿ.ಚಂದ್ರಶೇಖರ್‌ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.