ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಅಂತರ ಇರುವುದು ಶುಕ್ರವಾರ ಸಂಜೆ ಏಳು ಗಂಟೆಗೆ ಕಂಡು ಬಂತು.
ನದಿ ನೀರಿನ ಹರಿವು ರಾತ್ರಿವೇಳೆಗೆಲ್ಲ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸೇತುವೆ ಮೇಲೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ. ಕಂಪ್ಲಿ-ಗಂಗಾವತಿ ಸೇತುವೆ 1,944 ಅಡಿ ಉದ್ದ, 22 ಅಡಿ ಅಗಲ ವಿದ್ದು, 38 ಅಡಿಯ 51 ಕಮಾನುಗಳಲ್ಲಿ ನೀರು ರಭಸವಾಗಿ ಹರಿಯುತ್ತಿದೆ.
ಸದ್ಯ ನದಿ ಪಕ್ಕದ ಬಾಳೆತೋಟ, ಬತ್ತ ಮತ್ತು ಕಬ್ಬಿನ ಗದ್ದೆಗಳು ಜಲಾವೃತ ವಾಗಿವೆ. ಸಂಜೆ 7ಗಂಟೆಯಿಂದ ಕೇವಲ ಹಗುರ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದು, ಸಾರಿಗೆ ಸಂಸ್ಥೆ ಬಸ್‌ಗಳನ್ನು ಪರ್ಯಾಯ ಮಾರ್ಗವಾಗಿ ಸಂಚರಿಸು ವಂತೆ ಸೂಚಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ನದಿ ಪಾತ್ರದ ಕಂಪ್ಲಿ ಕೋಟೆ ನಿವಾಸಿಗಳಿಗೆ ಮತ್ತು ನದಿ ಭಾಗದ ಎಲ್ಲಾ ಹಳ್ಳಿಗಳಲ್ಲಿ ಡಂಗುರ ಹಾಕಿ ಸಾರ್ವ ಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕಂಪ್ಲಿ ಕೋಟೆ ಮೀನುಗಾರರು ಪ್ರವಾಹ ಇಳಿಮಖವಾಗುವವರೆಗೆ ಮೀನು ಹಿಡಿಯಲು ನದಿಯಲ್ಲಿ ಇಳಿಯ ಬಾರದು ಮತ್ತು ನದಿ ಅಂಚಿನಲ್ಲಿರುವ ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುವಂತೆ ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಆ.6ರಂದು ಇದೇ ರೀತಿ ಸೇತುವೆ ಮಟ್ಟಕ್ಕೆ ನೀರು ಹರಿದದ್ದನ್ನು ಇಲ್ಲಿ ನೆನಪಿಸಬಹುದು.
ಉಪ ತಹಸೀಲ್ದಾರ ಶಿವರಾಜ್, ಪಿಎಸ್‌ಐ ಡಾ.ಎಸ್. ಮಲ್ಲಿಕಾರ್ಜುನ, ಕಂದಾಯ ನೀರಿಕ್ಷಕ ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಎಸ್. ರಮೇಶ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.