ADVERTISEMENT

ಕಾಂಗ್ರೆಸ್‌ಗೆ ಭೀಮಪ್ಪ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 6:28 IST
Last Updated 31 ಮಾರ್ಚ್ 2018, 6:28 IST

ಕೂಡ್ಲಿಗಿ: ‘ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಕೆಪಿಸಿಸಿ ಸದಸ್ಯ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ‌ಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ನನ್ನಂಥ ಸ್ವಾಭಿಮಾನ ಇರುವ ಕಾರ್ಯಕರ್ತರಿಗೆ ಬೆಲೆ ಇಲ್ಲದಾಗಿದೆ’ ಎಂದರು.

‘ಕಳೆದ ಹತ್ತು ವರ್ಷದಿಂದ ಶಾಸಕರಾಗಿದ್ದರೂ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ. ಕನಿಷ್ಠ ಸರ್ಕಾರಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಿಲ್ಲ. ಇಂಥವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬಂದರೆ ಜನ ಹೇಗೆ ನಂಬುತ್ತಾರೆ?’ ಎಂದು ಎಂದು ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ವಿರುದ್ಧ ಹರಿಹಾಯ್ದರು.‘ಇಂಥವರ ಪರ ಪ್ರಚಾರ ಮಾಡುವುದಕ್ಕೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಇದರಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವರೂ ಸುಳ್ಳಿನ ಮನೆ ಕಟ್ಟುತ್ತಿದ್ದು, ಎಲ್ಲವನ್ನು ನಾಟಕೀಯವಾಗಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.‘ಪಕ್ಷದಲ್ಲಿ ಇದ್ದುಕೊಂಡು ದ್ರೋಹ ಮಾಡದೇ, ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದು ಕ್ಷೇತ್ರದ ಜನರ ಕೆಲಸ ಮಾಡುವ ಮೂಲಕ ನಾಗೇಂದ್ರ ಅವರ ವಿರುದ್ಧ ಪ್ರಚಾರ ಮಾಡಲಾಗುವುದು’ ಎಂದರು.

ADVERTISEMENT

‘ಹರಪನಹಳ್ಳಿ, ಹಡಗಲಿ ಸೇರಿದಂತೆ ಕೂಡ್ಲಿಗಿ ಕ್ಷೇತ್ರದಲ್ಲಿಯೂ ಚುನಾವಣಾ ಫಲಿತಾಂಶ ಹೆಚ್ಚು ಕಡಿಮೆ ಮಾಡುವ ಸಾಮರ್ಥ್ಯವಿದೆ. ಕಳೆದ ಹತ್ತು ವರ್ಷಗಳಿಂದಲೂ ಇಲ್ಲಿನ ಶಾಸಕರು ಏನು ಮಾಡಿದ್ದಾರೆ? ಎಂಬುದನ್ನು ಮತದಾರರು ನೋಡಿದ್ದಾರೆ. ಈ ಬಾರಿ ಅವರೆಲ್ಲ ಜಾಗೃತರಾಗಿದ್ದು, ತಪ್ಪು ಮಾಡುವುದಿಲ್ಲ’ ಎಂದರು.

‘ನನ್ನನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ತಮ್ಮ ಪಕ್ಷಕ್ಕೆ ಬರುವಂತೆ ಕರೆದಿದ್ದಾರೆ. ಮುಂದಿನ ನಡೆಯ ಕುರಿತು ಹಿತೈಷಿಗಳು ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ’ ಎಂದು ತಿಳಿಸಿದರು.

**

ರಾಜೀನಾಮೆ ಪತ್ರವನ್ನು ಕೆಪಿಸಿಸಿ ಕಚೇರಿಗೆ ಶುಕ್ರವಾರ ಬೆಳಿಗ್ಗೆ ಫ್ಯಾಕ್ಸ್‌ ಮೂಲಕ ಕಳಿಸಿದ್ದು, ಅಂಗೀಕಾರ ಆಗಿದೆಯೋ, ಇಲ್ಲವೋ ತಿಳಿದಲ್ಲ – ಕೋಡಿಹಳ್ಳಿ ಭೀಮಪ್ಪ, ಕೆಪಿಸಿಸಿ ಸದಸ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.