ADVERTISEMENT

ಕಾಂಗ್ರೆಸ್‌ನಲ್ಲಿ ಮುಂದುವರಿದ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 5:36 IST
Last Updated 25 ಅಕ್ಟೋಬರ್ 2017, 5:36 IST

ಬಳ್ಳಾರಿ: ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್‌ ಪಕ್ಷದೊಳಗಿನ ಭಿನ್ನಮತ ಮಂಗಳವಾರ ಪಾಲಿಕೆಯಲ್ಲಿ ನಡೆದ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಯಲ್ಲೂ ಮುಂದುವರಿಯಿತು. ಕಾಂಗ್ರೆಸ್‌ನ ವಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹದಿನಾರು ಸದಸ್ಯರು ಮತದಾನ ಮಾಡದೆ ಸಭೆಯಿಂದ ಹೊರಬಂದರು. ಅವರಲ್ಲಿ ನಾಲ್ವರು ಪಕ್ಷೇತರರೂ ಇದ್ದರು.

‘ಮೇಯರ್ ತಮ್ಮನ್ನು ನಿರ್ಲಕ್ಷ್ಯಿಸಿದ್ದಾರೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿಯ 19 ಸದಸ್ಯರ ಮತಗಳನ್ನು ಅವರ ಆದ್ಯತೆ ಅನುಸಾರ ಪರಿಗಣಿಸಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅವರ ಅನುಪಸ್ಥಿತಿಯಲ್ಲಿ ಚುನಾವಣೆ ನಡೆಸಿದ ಕಲಬುರ್ಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಮೂರು ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಿದರು. ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಈ ಸಮಿತಿಗೆ ಚುನಾವಣೆ ನಡೆಯಲಿಲ್ಲ.

ADVERTISEMENT

ಏಪ್ರಿಲ್‌ 12ರಂದು ನಡೆದಿದ್ದ ಮೇಯರ್‌ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೆ ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು. ನಂತರ ಎರಡು ಬಾರಿ ಚುನಾವಣೆಯನ್ನು ಮುಂದೂಡಲಾಗಿತ್ತು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ‘ಈ ಸಮಿತಿ ಏಳು ಸದಸ್ಯರ ಸ್ಥಾನಕ್ಕೆ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಎಸ್‌,ಮಲ್ಲನಗೌಡ ಮತ್ತು ಬಿ.ಬಸವರಾಜಗೌಡ ಅವರ ನಾಮಪತ್ರಕ್ಕೆ ಒಬ್ಬರೇ ಸೂಚಕರು ಇದ್ದ ಪರಿಣಾಮ ಅವರ ನಾಮಪತ್ರಗಳು ತಿರಸ್ಕೃತಗೊಂಡವು. ಉಳಿದ 10 ಮಂದಿಗೆ ದೊರೆತ ಆದ್ಯತೆ ಮತಗಳನ್ನು ಪರಿಗಣಿಸಿ ಏಳು ಸದಸ್ಯರನ್ನು ಆಯ್ಕೆ ಮಾಡಲಾಯಿತು’ ಎಂದು ಹರ್ಷ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.

ವಿ.ಕುಮಾರಸ್ವಾಮಿ, ಡಿ.ಲಕ್ಷ್ಮಿ, ಎಚ್‌.ಎಸ್‌.ರಾಜಕುಮಾರ್‌, ಐ.ದಿವ್ಯಕುಮಾರಿ, ಎಂ.ವಿವೇಕಾನಂದ, ನಸ್ರೀನ್‌ ಬೇಗಂ ಮತ್ತು ಶಾಸಬ್‌ ಆಯ್ಕೆಯಾದರು. ಉಳಿದ ಎರಡು ಸಮಿತಿಗಳಿಗೆ ತಲಾ ಐದು ಸದಸ್ಯರ ಸ್ಥಾನಗಳಿಗೆ ತಲಾ ಐವರು ನಾಮಪತ್ರ ಸಲ್ಲಿಸಿದ್ದರಿಂದ ಅವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು.
ತೆರಿಗೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ: ವೈ.ವಿ.ಸೀತಾರಾಂ, ಬಿ.ಕೆ.ಕೆರೆಕೋಡಪ್ಪ, ಜಿ.ಗೋವಿಂದರಾಜಲು, ಪಿ.ವೆಂಕಟಲಕ್ಷ್ಮಿ ಮತ್ತು ಚಂದ್ರಕಲಾ ಆಯ್ಕೆಯಾದರು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ನಾಗಮ್ಮ, ಟಿ.ಶ್ರೀನಿವಾಸ ಮೋತ್ಕರ್‌, ಈ.ಅಕ್ಬರ್‌, ಆರ್‌.ಸುಶೀಲಾಬಾಯಿ ಮತ್ತು ವಿ.ಲಕ್ಷ್ಮಿದೇವಿ ಆಯ್ಕೆಯಾದರು. ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.