ADVERTISEMENT

ಕಾಂಗ್ರೆಸ್ ತೆಕ್ಕೆಗೆ ಬಳ್ಳಾರಿ ಜಿ.ಪಂ.

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 7:00 IST
Last Updated 11 ಸೆಪ್ಟೆಂಬರ್ 2013, 7:00 IST

ಬಳ್ಳಾರಿ: ಜಿಲ್ಲಾ ಪಂಚಾಯಿತಿಯಲ್ಲಿ ಎಂಟು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.

ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹೊಳಲು ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಶೋಭಾ ಬೆಂಡಿಗೇರಿ ಆಯ್ಕೆಯಾದರು.

ಜಿ.ಪಂ. ಅಧ್ಯಕ್ಷೆಯಾಗಿದ್ದ ಬಿಎಸ್­ಆರ್ ಕಾಂಗ್ರೆಸ್ ಪಕ್ಷದ ಸುಮಂಗಲಾ ಗುಬಾಜಿ ಅವರ ವಿರುದ್ಧ ಕಳೆದ ಆ. 5ರಂದು ಕಾಂಗ್ರೆಸ್ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದರು. ಆ. 28ರಂದು ನಡೆದಿದ್ದ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಅವರು ಕೇವಲ 1 ಮತದ ಅಂತರದಲ್ಲಿ ಸೋಲುಂಡಿದ್ದರು.

ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳ­ವಾರ ನಡೆದ ಚುನಾವಣೆಯಲ್ಲಿ ಸುಮಂಗಲಾ ಹಾಗೂ ಶೋಭಾ ಸ್ಪರ್ಧಿ­ಸಿದ್ದರು. ಶೋಭಾ 18 ಮತಗಳನ್ನು ಗಳಿಸಿದರೆ, ಸುಮಂಗಲಾ 17 ಮತ ಪಡೆದರು. ಚೋರನೂರು ಕ್ಷೇತ್ರದ ಸದಸ್ಯರಾಗಿದ್ದ ಭೀಮಾ ನಾಯ್ಕ ಅವರು ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ 1 ಸ್ಥಾನ ತೆರವಾಗಿದ್ದು, 36 ಸದಸ್ಯ ಬಲದ ಪೈಕಿ ಪ್ರಸ್ತುತ ಸದಸ್ಯರ ಸಂಖ್ಯೆ 35ಕ್ಕೆ ಕುಸಿದಿದೆ.

ಕಾಂಗ್ರೆಸ್ ನ 16 ಜನ ಸದಸ್ಯರು, ಬಿಜೆಪಿಯ 17, ಜೆಡಿಎಸ್್ ನ ಒಬ್ಬ ಸದಸ್ಯೆ  ಸೇರಿದಂತೆ ಒಟ್ಟು 35 ಸದಸ್ಯರು ಮತದಾನದಲ್ಲಿ ಭಾಗವಹಿಸಿದರು.

ಹಚ್ಚೊಳ್ಳಿ ಕ್ಷೇತ್ರದ ಸದಸ್ಯೆ ಜೆಡಿಎಸ್‌ನ ಸರಸ್ವತಿ ಹಾಗೂ ಕೋಗಳಿ ಕ್ಷೇತ್ರದ ಬಿಜೆಪಿ ಸದಸ್ಯೆ ರತ್ನಮ್ಮ ಕಾಂಗ್ರೆಸ್‌ಗೆ ಬೆಂಬಲ ನೀಡಿದರು.
ಎಂಟು ವಷರ್ಗಳ ಹಿಂದೆ ಬಿಜೆಪಿ ‘ಆಪರೇಷನ್‌ ಕಮಲ’ ಮಾಡಿ ನಾಲ್ವರನ್ನು ಸೆಳೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ‘ಆಪರೇಷನ್‌ ಹಸ್ತ’ದ ಮೂಲಕ ಬಿಜೆಪಿ ಸದಸ್ಯೆಯನ್ನು ಸೆಳೆಯುವ ಮೂಲಕ ಮತ್ತೆ ಅಧಿಕಾರ ಕಸಿದುಕೊಂಡಿದೆ.

ಗುಲ್ಬರ್ಗ ವಿಭಾಗದ ಪ್ರಭಾರಿ ಪ್ರಾದೇಶಿಕ ಆಯುಕ್ತರಾಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ನೂತನ ಅಧ್ಯಕ್ಷರ ಆಯ್ಕೆ ಘೋಷಿಸಿದರು.
ಹರಪನಹಳ್ಳಿ ಶಾಸಕ, ಜಿಲ್ಲಾ ಕಾಂಗ್ರೆಸ್‌ನ ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಪಿ. ರವೀಂದ್ರ, ಸಂಡೂರು ಶಾಸಕ ಈ.ತುಕಾರಾಂ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಜಿ.ಪಂ. ಸಿಇಓ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.