ADVERTISEMENT

ಕುಡಿಯುವ ನೀರು ಯೋಜನೆ:ಆಗಸ್ಟ್‌ನೊಳಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 3:30 IST
Last Updated 21 ಮಾರ್ಚ್ 2012, 3:30 IST

ಬಳ್ಳಾರಿ: ಬಳ್ಳಾರಿ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲೆಂದೇ ಆರಂಭಿಸಲಾಗಿರುವ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನ ರೂ 98 ಕೋಟಿ ವೆಚ್ಚದ ಕಾಮಗಾರಿಯು ಇದೇ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.

ತಾಲ್ಲೂಕಿನ ಮೋಕಾ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ಜಾಕ್‌ವೆಲ್, ಸಂಗನಕಲ್ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ನೀರು ಶುದ್ಧೀಕರಣ ಘಟಕ, ಪೈಪ್‌ಲೈನ್ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಮೋಕಾದಿಂದ ಬಳ್ಳಾರಿ ನಗರದವರೆಗೆ ಪೈಪ್‌ಲೈನ್ ಕಾಮಗಾರಿ ಹಾಗೂ ಜಾಕ್‌ವೆಲ್ ಕಾಮಗಾರಿಯು ಮುಕ್ತಾಯದ ಹಂತ ತಲುಪಿದೆ. ನೀರು ಶುದ್ಧೀಕರಣ ಘಟಕದ ಕಾಮಗಾರಿಯು ಪ್ರಗತಿ ಹಂತದಲ್ಲಿದೆ, ಅಲ್ಲಿಪುರದ ಬಳಿಯಿರುವ ಕೆರೆಗೆ ಇಲ್ಲಿಂದ ನೀರು ಪೂರೈಸಲೆಂದೇ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆಗಸ್ಟ್ ಒಳಗಾಗಿ ಪೂರ್ಣಗೊಳ್ಳಲಿದೆ.
 
1219 ಎಂಎಂ ಸುತ್ತಳತೆಯ ಪೈಪ್‌ಗಳನ್ನು ಬಳಸಲಾಗುತ್ತಿದೆ. ಈ ಪೈಪ್‌ಗಳು ಅನೇಕ ದಶಕಗಳವರೆಗೆ ಬಾಳಿಕೆ ಬರುವಂತೆ ರೂಪಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ನೀರು ಪೂರೈಕೆ ಆರಂಭವಾಗಲಿದೆ ಎಂದರು.

ನೀರಿನ ಸಂಗ್ರಹದ ಕೊರತೆ ಇರುವುದರಿಂದಲೇ ಪ್ರಸಕ್ತ ಬೇಸಿಗೆಯಲ್ಲಿ ನಗರಕ್ಕೆ ನೀರು ಪೂರೈಸುವಲ್ಲಿ ವ್ಯತ್ಯಯ ಉಂಟಾಗಲಿದೆ. ಆದರೂ ಜನತೆಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಪ್ರಸ್ತುತ ಕಾಮಗಾರಿ ಪೂರ್ಣಗೊಂಡ ಬಳಿಕ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪಮೇಯರ್ ಇಬ್ರಾಹಿಂ ಬಾಬು, ಪಾಲಿಕೆ ಸದಸ್ಯರಾದ ಕೆ. ಬಸವರಾಜ್,  ಮಲ್ಲನಗೌಡ, ಪೌರಾಯುಕ್ತ ಡಿ.ಎಲ್. ನಾರಾಯಣ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಾದ ಯಾಸಿನ್, ನಾರಾಯಣ್ ರಾವ್, ಗಂಗಾಧರ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.