ADVERTISEMENT

ಕೃಷ್ಣಾನಗರದಲ್ಲಿ ನಿತ್ಯವೂ ಕ್ಷೀರಧಾರೆ...

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 9:53 IST
Last Updated 1 ಜೂನ್ 2013, 9:53 IST

ಬಳ್ಳಾರಿ: ಜಿಲ್ಲಾ ಕೇಂದ್ರದಿಂದ ಕೇವಲ 13 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿರುವ ಜನಸಂಖ್ಯೆ ಅಂದಾಜು ಎರಡು ಸಾವಿರ. ಇಲ್ಲಿನ ಬಹುತೇಕ ನಿವಾಸಿಗಳು ಕೃಷಿಯನ್ನೇ ಅವಲಂಬಿಸಿದ್ದು, ಅದರಲ್ಲೇ ಅರ್ಧದಷ್ಟು ಜನ ಹಾಲು ಉತ್ಪಾದನೆಯಲ್ಲಿ ತೊಡಗಿ `ಸ್ವಾವಲಂಬಿ' ಜೀವನ ನಡೆಸುತ್ತಿದ್ದಾರೆ.

ನಿತ್ಯವೂ ಸರಿಸುಮಾರು 1300ರಿಂದ 1400 ಲೀಟರ್ ಹಾಲನ್ನು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ಮೂಲಕ ಬಳ್ಳಾರಿಯಲ್ಲಿರುವ ಹಾಲು ಉತ್ಪಾದಕರ ಒಕ್ಕೂಟಕ್ಕೆ ನೀಡುತ್ತಿರುವ ಗ್ರಾಮಸ್ಥರು, 500ಕ್ಕೂ ಅಧಿಕ ಹಸುಗಳು, ಮುನ್ನೂರಕ್ಕೂ ಅಧಿಕ ಎಮ್ಮೆಗಳನ್ನು ಸಾಕಿಕೊಂಡಿದ್ದು, ಕೃಷಿಯ ಉಪ ಉತ್ಪನ್ನಕ್ಕೆ ಆದ್ಯತೆ ನೀಡಿರುವುದು ವಿಶೇಷ.

ಬಹುತೇಕ ತೆಲುಗು ಭಾಷಿಕರೇ ಇರುವ ಬಳ್ಳಾರಿ ತಾಲ್ಲೂಕಿನ ಕೃಷ್ಣಾ ನಗರ ಕ್ಯಾಂಪ್‌ನಲ್ಲೇ ಕ್ಷೀರಧಾರೆ ಹರಿಯುತ್ತಿದ್ದು, ಮಹಿಳೆಯರು, ಯುವಕರು ಮತ್ತು ಮಕ್ಕಳು ಹಸುವಿನ ಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬಡತನದ ಬೇಗೆಯಿಂದ ಹೊರಬಂದಿದ್ದಾರೆ.

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ಬಹುತೇಕ ಸಹಾಯ, ಸಹಕಾರ, ಸೌಲಭ್ಯವನ್ನು ಪಡೆಯುತ್ತ, ಹೈನುಗಾರಿಕೆಯಲ್ಲಿ ನಿರತರಾಗಿರುವ ಗ್ರಾಮಸ್ಥರು `ಹೈನುಗಾರಿಕೆ'ಯ `ಸ್ವಯಂ ಉದ್ಯೋಗ'ದೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ.

ಬಳ್ಳಾರಿ- ಯರ‌್ರಂಗಳಿ ರಸ್ತೆಯಲ್ಲಿರುವ ಈ ಗ್ರಾಮದಲ್ಲಿ ತುಂಗಭದ್ರಾ ಕಾಲುವೆಯ ನೀರಾವರಿ ಸೌಲಭ್ಯದೊಂದಿಗೆ ಬತ್ತ ಮತ್ತಿತರ ಬೆಳೆಯನ್ನು ಬೆಳೆಯುವ ರೈತರೇ ವಾಸವಾಗಿದ್ದಾರೆ. ಗ್ರಾಮದ ಸುತ್ತ ಕೇವಲ ಆರು ತಿಂಗಳು ಮಾತ್ರ ಹಚ್ಚ ಹಸಿರಿನಿಂದ ಕಂಗೊಳಿಸುವ ವಾತಾವರಣ ಇದ್ದರೂ, ಒಣ ಹುಲ್ಲನ್ನೇ ನೀಡುವ ಮೂಲಕ ಅಧಿಕ ಹಾಲು ಕೊಡುವ ಮಿಶ್ರತಳಿಯ ಹಸು, ಎಮ್ಮೆಗಳನ್ನು ಸಾಕಿಕೊಂಡಿದ್ದು, ನಿತ್ಯವೂ ಅವುಗಳಿಗೆ ಒಕ್ಕೂಟ ಒದಗಿಸುವ ಪೌಷ್ಟಿಕ ಆಹಾರ ನೀಡಿ, ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಲ್ಲದೆ, ಮೊಸರು, ಬೆಣ್ಣೆ, ತುಪ್ಪ ತಯಾರಿಸಿಯೂ ನಗರ ಪ್ರದೇಶದ ಜನತೆಗೆ ಒದಗಿಸುತ್ತಿದ್ದಾರೆ.

`ಮೊದಮೊದಲು ಕೇವಲ ಕೃಷಿಯನ್ನೇ ಅವಲಂಬಿಸಿದ್ದ ಊರಿನ ಜನತೆ, ಕೃಷಿ ಉತ್ಪಾದನೆಗಳ ಬೆಲೆಯಲ್ಲಿನ ಏರಿಳಿತದಿಂದಾಗಿ ಸಾಲದ ಸುಳಿಗೆ ಸಿಲುಕಿದ್ದರು. ಹೈನುಗಾರಿಕೆ ಆರಂಭಿಸಿದ ನಂತರ ಯಾರಿಗೂ ಸಾಲದ ಭಯವೇ ಇಲ್ಲ. ಪ್ರತಿ ಕುಟುಂಬ ಎಲ್ಲ ಖರ್ಚನ್ನೂ ತೆಗೆದು, ಮಾಸಿಕ ಕನಿಷ್ಠ ರೂ 4 ಸಾವಿರದಷ್ಟು ಆದಾಯವನ್ನು ಹೈನುಗಾರಿಕೆಯಿಂದಲೇ ಪಡೆಯುತ್ತಿದೆ. ಇನ್ನು ಕೆಲವು ಕುಟುಂಬದವರು ರೂ 50 ಸಾವಿರದಿಂದ ರೂ ಒಂದು ಲಕ್ಷದವರೆಗೂ ಆದಾಯ ಹೊಂದಿ ನೆಮ್ಮದಿಯ ಜೀವನ ನಡೆಸುವಂತಾಗಿದೆ' ಎಂದು ಗ್ರಾಮದ ಮುಖಂಡ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ.ವೆಂಕಟೇಶ್ವರರಾವ್ `ಪ್ರಜಾವಾಣಿ'ಗೆ ತಿಳಿಸಿದರು.

`ನಮ್ಮಲ್ಲಿ ಆರು ಹಸುಗಳೂ, ಒಂದು ಎಮ್ಮೆ ಇದೆ. ಪ್ರತಿ ಹಸು ನಿತ್ಯ 20ರಿಂದ 25 ಲೀಟರ್ ಹಾಲು ನೀಡುತ್ತದೆ. ನಿತ್ಯವೂ ಹಸುವಿನ ಲಾಲನೆ, ಪಾಲನೆ, ನಿರ್ವಹಣೆಯ ಜವಾಬ್ದಾರಿ ಇದೆ. ಹಸು ಮತ್ತು ಎಮ್ಮೆಗಳ ಆರೋಗ್ಯವನ್ನೂ ನೋಡಿಕೊಳ್ಳಬೇಕು. ಬೆಳಿಗ್ಗೆ 4 ಗಂಟೆಗೇ ಎದ್ದು ಹಸುಗಳಿಗೆ ಆಹಾರ ನೀಡಿ, ಹಾಲು ಹಿಂಡಿಕೊಳ್ಳಬೇಕು. ಸಂಜೆ 6ರೊಳಗೆ ಹಾಲು ಹಿಂಡಬೇಕು. ಸಮಯಕ್ಕೆ ಸರಿಯಾಗಿ ಆಹಾರ ನೀಡಬೇಕು, ಕೊಟ್ಟಿಗೆ ಮತ್ತು ಹಸು, ಎಮ್ಮೆಗಳ ಸ್ವಚ್ಛತೆಗೂ ಆದ್ಯತೆ ನೀಡಬೇಕು' ಎಂದು ಸಂಘಕ್ಕೆ ನಿತ್ಯ 150 ಲೀಟರ್ ಹಾಲು ಮಾರಾಟ ಮಾಡುವ ಬಿ.ತಿಮ್ಮರಾಜು ಅವರ ಪುತ್ರರಾದ ವಿಜಯಕುಮಾರ್ ಹಾಗೂ ಜಯವರ್ಧನ್ ಹೇಳಿದರು.

`ಕಳೆದ 20 ವರ್ಷಗಳಿಂದ ಹೈನುಗಾರಿಕೆಯನ್ನೇ ಅವಲಂಬಿಸಿದ್ದೇವೆ. ಮೊದಲು ಒಂದು ಎಕರೆ ಮಾತ್ರ ಕೃಷಿ ಭೂಮಿ ಹೊಂದಿದ್ದ ನಾವು ಹಾಲು ಉತ್ಪಾದನೆಯಿಂದ ಇತ್ತೀಚೆಗಷ್ಟೇ ಮತ್ತೆ 4 ಎಕರೆ ಜಮೀನು ಖರೀದಿಸಿದ್ದೇವೆ. 8 ಹಸುಗಳು, ಒಂದು ಎಮ್ಮೆ ನಮ್ಮ ನೆಮ್ಮದಿಯ ಜೀವನಕ್ಕೆ ಆಧಾರವಾಗಿದೆ' ಎಂದು ಹೆಮ್ಮೆಯಿಂದ ಹೇಳಿಕೊಂಡವರು ಎಂ.ಸತ್ಯನಾರಾಯಣ ಹಾಗೂ ಅವರ ಪುತ್ರರಾದ ಮುರಳಿ ಮತ್ತು ನರೇಶ.
ಸಂಘದಲ್ಲಿ ಗ್ರಾಮದ 384 ಜನ ಸದಸ್ಯರಿದ್ದಾರೆ. ಇಲ್ಲಿನ ಪ್ರತಿ ಮನೆಯಲ್ಲೂ ಹಸು, ಎಮ್ಮೆಗಳಿವೆ. ಎಲ್ಲಕ್ಕೂ ವಿಮೆ ಮಾಡಿಸಲಾಗಿದೆ. ಒಕ್ಕೂಟದಿಂದ ಸದಾ ನೆರವು ನೀಡಲಾಗುತ್ತದೆ ಎಂದು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಯರ‌್ರಿಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.