ADVERTISEMENT

ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:30 IST
Last Updated 1 ಆಗಸ್ಟ್ 2012, 5:30 IST

ಕೂಡ್ಲಿಗಿ:  ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಗಡುವು ನೀಡುವ ಮೊದಲ ಹಂತದ ಹೋರಾಟವಾಗಿ ಆಗಸ್ಟ್ 1ರಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಲು ಸಿದ್ಧಗೊಂಡಿವೆ.

ಬರಗಾಲದ ಸೀಮೆಯೆಂದೇ ಹೆಸರಾಗಿರುವ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಬೇಡಿಕೆ ಈಡೇರಿಸುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ತಾಲ್ಲೂಕಿನ ಹೋರಾಟ ಸಮಿತಿಯ ಕೂಗು ಇನ್ನಾದರೂ ಸರ್ಕಾರಕ್ಕೆ ಕೇಳೀತೇ? ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

 ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ರೈತರು ಪ್ರತಿ ವರ್ಷ ಮಳೆಯ ಕೊರತೆಯನ್ನು ಎದುರಿಸಬೇಕಾಗಿದೆ. ಈ ಬಾರಿ ಮಳೆ ಸಂಪೂರ್ಣ  ಕೈಕೊಟ್ಟಿದೆ. ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಿತಾದರೂ, ದುರದೃಷ್ಟವಷಾತ್ ಭದ್ರಾ ಮೇಲ್ದಂಡೆ ಯೋಜನೆಗೆ ತಾಲ್ಲೂಕು ಸೇರ್ಪಡೆಗೊಳ್ಳಲಿಲ್ಲ.
ನೀರಾವರಿ ತಜ್ಞ ಪರಮಶಿವಯ್ಯ ಈ ಮೊದಲು ಸರ್ಕಾರಕ್ಕೆ ತಮ್ಮ ವರದಿಯನ್ನು ಸಲಿಸ್ಲಿದ್ದರು. 

ಆ ವರದಿಯ ಪ್ರಕಾರ ತಾಲ್ಲೂಕಿನ 44 ಸಾವಿರ ಹೆಕ್ಟೇರ್ ಪ್ರದೇಶವನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಒಳಪಡಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು. ಆದರೆ ಸರ್ಕಾರಕ್ಕೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ದಾವಣಗೆರೆ ಜಿಲ್ಲೆಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಂತೆ ನೀರು ಹರಿಸುವ ಕಾಮಗಾರಿ ಈಗಾಗಲೇ ಚಾಲನೆಗೊಂಡಿದೆ. ಈ ಕಾಮಗಾರಿಯನ್ನು ತಾಲ್ಲೂಕಿನವರೆಗೂ ವಿಸ್ತರಿಸುವುದು ಅತಿ ಸುಲಭವಾಗಿದೆ ಎನ್ನಲಾಗಿದೆ. ಆದರೆ ಅದು ಜಾರಿಗೊಳ್ಳುತ್ತಿಲ್ಲ. 

 ದಾವಣಗೆರೆ ಜಿಲ್ಲೆಯ ಪ್ರಬಲ ರಾಜಕೀಯ ನಾಯಕರ ಹಿತ ಕಾಪಾಡಲು ಸರ್ಕಾರ ಯಾವುದೇ ವಿಳಂಬ ಮಾಡದೆ ಭದ್ರಾ ಮೇಲ್ದಂಡೆ ಯೋಜಯನ್ನು ಜಾರಿಗೊಳಿಸಿದ್ದರೆ, ಇತ್ತ ಕೂಡಿಗ್ಲಿ ತಾಲ್ಲೂಕಿನ ಜನತೆಗೆ ಆ ಯೋಗವಿಲ್ಲ ಎಂಬಂತಾಗಿದೆ ಎನ್ನುವ ಮಾತು ಕೇಳಿಬಂದಿದೆ. 

 ತಾಲ್ಲೂಕಿನಲ್ಲಿ 28 ದೊಡ್ಡ ಕೆರೆಗಳಿದ್ದು, 27 ಸಣ್ಣ ಕೆರೆಗಳಿವೆ. ಇದೀಗ ಕೆರೆಗಳಿಗೆ ನೀರುತುಂಬಿಸುವ ಹೋರಾಟಕ್ಕೆ ಮತ್ತೆ ಚಾಲನೆ ದೊರೆತಿದ್ದು, ಹೋರಾಟ ಸಮಿತಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು, ಹಂತ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಹೋರಾಟ ಸಮಿತಿಯು ಈ ಮೊದಲು ಅನೇಕ ರೀತಿಯ ಹೋರಾಟಗಳನ್ನು ಕೈಗೊಂಡು ತಾಲ್ಲೂಕಿನ ಜನತೆಯಲ್ಲಿ ಜಾಗೃತಿ ಮೂಡಿಸಿತ್ತು. ಆದರೆ ವಿವಿಧ ಕಾರಣಗಳಿಗೆ ಹೋರಾಟ ಸ್ಥಗಿತಗೊಂಡಿತ್ತು. ಇದೀಗ ಹೋರಾಟಕ್ಕೆ ಮತ್ತೆ ಚಾಲನೆ ದೊರೆತಿದ್ದು, ಈ ಹೋರಾಟದಲ್ಲಿ ತಾಲ್ಲೂಕಿನ ಹಾಲಿ ಜನಪ್ರತಿ ನಿಧಿಗಳು, ಮಾಜಿ ಜನಪ್ರತಿನಿಧಿಗಳು ಹಾಗೂ ತಾಲ್ಲೂಕಿನ ಪ್ರತಿಯೊಬ್ಬರೂ ಹೋರಾಟದಲಿ ್ಲತೊಡಗಿಸಿಕೊಳ್ಳಬೇಕು ಎಂಬುದು ಹೋರಾಟ ಗಾರರ ಮನವಿಯಾಗಿದೆ.

ಸರ್ಕಾರ ಭದ್ರ ಮೇಲ್ದಾಂಡೆ ಯೋಜನೆಯನ್ನು ಜಾರಿಗೊಳಿಸಲು ತಾಂತ್ರಿಕ ಕಾರಣ ನೀಡಿದರೆ, ಪರ್ಯಾಯ ಯೋಜನೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕೆಂಬುದು ಹೋರಾಟಗಾರರ ತೀವ್ರ ಒತ್ತಾಯವಾಗಿದೆ.
 
ದಾವಣಗೆರೆ ಜಿಲ್ಲೆಯ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ರೀತಿಯಲ್ಲಿಯೇ ಕೂಡ್ಲಿಗಿ ತಾಲ್ಲೂಕಿನ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿ ಕೊಳ್ಳಬೇಕೆಂಬುದು ಹೋರಾಟಗಾರರ ಬೇಡಿಕೆ.  ತಾಲ್ಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ 5 ಟಿಎಂಸಿಯವರೆಗೂ ನೀರು ಹರಿಸಬಹುದಾಗಿದೆ ಎಂಬುದು ಹೋರಾಟಗಾರರ ಒತ್ತಾಯವಾಗಿದೆ.

ಈ ಬಾರಿಯ ಹೋರಾಟವನ್ನು ಗುರಿ ಮುಟ್ಟುವವರೆಗೂ ನಡೆಸಬೇಕೆಂಬುದು ಜನರ ನಿರೀಕ್ಷೆಯಾಗಿದೆ. ಈ ಹಿಂದಿನ ಹೋರಾಟವು ಪ್ರತಿಭಟನೆಗಳಂತೆ ಹತ್ತರಲ್ಲಿ ಹನ್ನೊಂದು ಎಂಬಂತಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮುಂಚೂಣಿ ಹೋರಾಟಗಾರರ ಮೇಲಿದೆ.
 
ಇದಕ್ಕೆ ನಾಡಿನ ಎಲ್ಲ ಸ್ವಾಮಿಗಳು, ಪ್ರಜ್ಞಾವಂತರು, ಪ್ರಮುಖವಾಗಿ ರೈತರು, ವಿಧ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಳ್ಳ ಬೇಕಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ತಾಲ್ಲೂಕಿಗೆ ನೀರುಣಿಸುವ ಯೋಜನೆಯನ್ನು ಜಾರಿಗೊಳಿ ಸುವವರೆಗೂ ಹೋರಾಟವನ್ನು ಬಿಡದೆ ಮುನ್ನಡೆ ಸಬೇಕಾಗಿದೆ ಎಂಬುದು ತಾಲ್ಲೂಕಿನ ಜನತೆಯ ಹಾಗೂ ರೈತರ ಅಭಿಪ್ರಾಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.