ADVERTISEMENT

ಕೇಂದ್ರದ ನೀತಿ ವಿರೋಧಿಸಿ ಜೈಲ್‌ಭರೋ ಚಳವಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 4:20 IST
Last Updated 24 ಸೆಪ್ಟೆಂಬರ್ 2011, 4:20 IST

ಬಳ್ಳಾರಿ: ಕೇಂದ್ರದ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ಉದಾರೀಕರಣ, ಆರ್ಥಿಕ ಹಾಗೂ ಬೆಲೆ ಏರಿಕೆ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನವೆಂಬರ್ 8ರಂದು ರಾಷ್ಟ್ರವ್ಯಾಪಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರದ ಜಾಗತೀಕರಣ, ಖಾಸಗೀಕರಣ ನೀತಿಯಿಂದ ರಾಷ್ಟ್ರದ ಲಕ್ಷಾಂತರ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಆರೋಪಿಸಿದರು.

ಪೆಟ್ರೋಲ್. ಅಡುಗೆ ಅನಿಲ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರ ಉದಾರೀಕರಣ, ಖಾಸಗೀಕರಣ ನೀತಿಯಿಂದ ದೇಶದ 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್, ಬಿಜೆಪಿ ಬೆಂಬಲಿತ ಐಎನ್‌ಟಿಯುಸಿ ಹಾಗೂ ಬಿಎಂಎಸ್ ಸೇರಿದಂತೆ ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿ ದೇಶಾದ್ಯಂತ ಹೋರಾಟ ನಡೆಸಲಿವೆ ಎಂದು ತಿಳಿಸಿದರು.

ಗುತ್ತಿಗೆ ಆಧಾರದ ನೇಮಕಾತಿ ರದ್ದುಗೊಳಿಸಬೇಕು, ತಿಂಗಳಿಗೆ ರೂ 10 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು, ಕಾರ್ಮಿಕ ನ್ಯಾಯಾಲಯದಲ್ಲಿ ನೇರವಾಗಿ ತೀರ್ಪು ಪ್ರಕಟವಾಗಬೇಕು ಹಾಗೂ ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯವಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಸರ್ಕಾರಿ ನೌಕರರ ನಿವೃತ್ತಿಯ ವಯಸ್ಸನ್ನು ಹೆಚ್ಚಿಸಿದಂತೆಯೇ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ನಿವೃತ್ತಿ ವಯಸ್ಸನ್ನೂ ಹೆಚ್ಚಿಸಬೇಕು ಎಂದೂ ಅವರು ಕೋರಿದರು.

ಈ ಕುರಿತ ಮಸೂದೆ ಸಿದ್ಧವಿದ್ದರೂ ಅದನ್ನು ಮಂಡಿಸದೆ ಬಂಡವಾಳದಾರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಸಚಿವ ಬಿ.ಎನ್. ಬಚ್ಚೇಗೌಡ ಕಾರ್ಮಿಕರನ್ನು ನಿರ್ಲಕ್ಷಿಸಿದ್ದಾರೆ ಎಂದರು.

ಕಾರ್ಮಿಕ ನ್ಯಾಯಲಯ ನೀಡಿದ ತೀರ್ಪುನ್ನು ಅಧಿಕೃತ ಗೊಳಿಸಲು ವರ್ಷಗಟ್ಟಲೇ ಸಮಯ ಹಿಡಿಯುತ್ತಿದೆ. ಸರ್ಕಾರ ಈವರೆಗೆ ಮೂದೆ ಮಂಡಿಸುವ ಗೋಜಿಗೆ ಹೋಗಿಲ್ಲ. ರಾಜ್ಯದ ಕಾರ್ಮಿಕ ಸಂಘಟನೆಗಳಿಗೆ ಅಧಿಕೃತ ಮುದ್ರೆ ಒತ್ತುವ ನ್ಯಾ. ಹಿರೇಮಠ ಸಮಿತಿ ಶಿಫಾರಸ್ಸು ಸಹ ನೆನೆಗುದಿಗೆ ಬಿದ್ದಿದೆ ಎಂದು ಕಿಡಿಕಾರಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್, ಸದಸ್ಯ ಕಾಂತಯ್ಯ ದುತ್ತರಗಿಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.