ADVERTISEMENT

ಕೇಂದ್ರ ಸರ್ಕಾರದ ಪ್ರತಿಕೃತಿ ದಹನ

’ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಖಂಡನೀಯ’

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:37 IST
Last Updated 19 ಮೇ 2018, 9:37 IST

ಬಳ್ಳಾರಿ: ಬಹುಮತ ಪಡೆಯದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿ ನೀಡಿರುವುದು ಖಂಡನೀಯ ಎಂದು ಪ್ರತಿಭಟಿಸಿದ ಎಸ್‌ಯುಸಿಐಸಿ ಮುಖಂಡರು ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹಿಸಿದರು. ‘ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ’ ಎಂದು ಘೋಷಣೆಯನ್ನು ಕೂಗಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಬಹುಮತ ಇಲ್ಲದಿದ್ದರೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

‘ಗೋವಾ, ಮಣಿಪುರ ಮತ್ತು ಮೇಘಾಲಯದಲ್ಲಿ ಅತಂತ್ರ ಚುನಾವಣೆ ಫಲಿತಾಂಶ ಬಂದಿದ್ದಾಗ ಆ ರಾಜ್ಯಗಳಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿರಲಿಲ್ಲ. ಆದರೆ, ಕರ್ನಾಟಕದಲ್ಲಿ ಏಕೆ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆ ಅವಕಾಶ ಕಲ್ಪಿಸಿದರು’ ಎಂದು ಪ್ರಶ್ನಿಸಿದರು.

ADVERTISEMENT

ಮುಖಂಡರಾದ ಮಂಜುಳಾ, ನಾಗಲಕ್ಷ್ಮಿ, ದೇವದಾಸ್, ಡಾ.ಪ್ರಮೋದ್, ಶಾಂತಾ, ಹನುಮಪ್ಪ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.