ADVERTISEMENT

ಕೊಳಚೆ ಕೋಟೆಯಾದ ಗುಡೇಕೋಟೆ ಗ್ರಾಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:20 IST
Last Updated 5 ಫೆಬ್ರುವರಿ 2011, 7:20 IST

ಕೂಡ್ಲಿಗಿ: ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದಾದ ಗುಡೇಕೋಟೆ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ.ತಾಲ್ಲೂಕಿನಲ್ಲಿಯೇ ಅತಿ ಹಿಂದುಳಿದ ಹೋಬಳಿ ಕೇಂದ್ರವೆಂಬ ಹಣೆಪಟ್ಟಿಯೂ ಇದಕ್ಕಿದೆ.ಈ ಗ್ರಾಮದಲ್ಲಿ ಎಚ್ಚರಿಕೆಯಿಂದ ಸಂಚರಿಸ ಬೇಕಾಗುತ್ತದೆ.ಇಡೀ ಗ್ರಾಮವೇ ಕೊಳಚೆ ಎಂಬಂತಾಗಿದೆ. ಕೆಲವೆಡೆ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ,ಚರಂಡಿ ವ್ಯವಸ್ಥೆಯೇ ಇಲ್ಲದೆ ಚರಂಡಿಯ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತದೆ.

ಕೆಲವೆಡೆ ರಸ್ತೆಗಳಿಲ್ಲದೆ, ಚರಂಡಿಯಿಲ್ಲದೆ, ಕೊಳಚೆ ನೀರೆಲ್ಲ ದಾರಿಯಲ್ಲಿ ಸಂಗ್ರಹ ವಾಗಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ. ಕೆಲವೆಡೆ ಚರಂಡಿಗಳಿದ್ದರೂ ಕೊಳಚೆ ಹರಿದು ಹೋಗದೆ ಸೊಳ್ಳೆಗಳ ಆವಾಸಸ್ಥಾನ ಎನಿಸಿದೆ.ಗ್ರಾಮದಲ್ಲಿ ಸಾಮೂಹಿಕ ಶೌಚಾಲಯಗಳು ಇಲ್ಲದಿರುವುದರಿಂದ ಎಲ್ಲರಿಗೂ ಬಯಲೇ ಆಶ್ರಯವಾಗಿದೆ. ಗ್ರಾಮದಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ, ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲದೆ ಶಾಲೆಯ ಪಕ್ಕದಲ್ಲೇ ತೆರೆದ ಬಾವಿಯೊಂದು ಇರುವುದರಿಂದಾಗಿ ಮಕ್ಕಳಿಗೆ ಅಪಾಯಕಾರಿಯಾಗಿದೆ.

ದುರದೃಷ್ಟಕರ ಸಂಗತಿಯೆಂದರೆ ಹೋಬಳಿ ಕೇಂದ್ರವಾಗಿದ್ದರೂ ಸರಿಯಾದ ಬಸ್ ನಿಲ್ದಾಣವಿಲ್ಲದೇ ಇರುವುದು. ಗುಡೇಕೋಟೆಯು ಮೊಳಕಾಲ್ಮೂರು, ಬಳ್ಳಾರಿಯಂತಹ ನಗರಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಹೊಂದಿದ್ದರೂ ಇಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಲ್ಲೇ ಕಾಯುವ ದುಸ್ಥಿತಿಯಿದೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ರೀತಿಯ ಸೌಲಭ್ಯಗಳಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಇದನ್ನು ಮೇಲ್ದರ್ಜೆಗೆ ಏರಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ. ಗ್ರಾಮದಲ್ಲಿ ವೈದ್ಯರಾರೂ ವಾಸವಿಲ್ಲವಾದ್ದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆಸ್ಪತ್ರೆ ಯಿದ್ದೂ ಔಷಧಿಗಳನ್ನು ಅಂಗಡಿ ಯಿಂದಲೇ ಕೊಂಡು ತರಬೇಕಾಗುತ್ತದೆ ಎಂಬುದು ಇಲ್ಲಿನ ರೋಗಿಗಳ ಅಳಲು. ವಿಶೇಷವೆಂದರೆ ಗ್ರಾಮದಲ್ಲಿ ವಿವಿಧ ಜನಾಂಗಗಳಿಗಾಗಿ ಕಲ್ಯಾಣ ಮಂಟಪ ಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳಿಗೆ ಮೂಲ ಸೌಕರ್ಯ ಗಳಿಲ್ಲದೇ ವ್ಯರ್ಥವಾಗುತ್ತಿವೆ.

ಗ್ರಾಮದಲ್ಲಿ ಅಧಿಕಾರಿ ವರ್ಗದವರು ಯಾರೂ ವಾಸವಾಗಿಲ್ಲ. ಅಲ್ಲದೆ ತಾತ್ಕಾಲಿಕ ಸಿಬ್ಬಂದಿಯವರೇ ಹೆಚ್ಚಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡುವುದೇ ಅಪರೂಪ ಎನ್ನುತ್ತಾರೆ ಕನ್ನಡ ಕ್ರಾಂತಿದಳ ಯುವಕರ ಸಂಘದ ಪದಾಧಿಕಾರಿಗಳು. ಈ ಪ್ರದೇಶದಲ್ಲಿ ರೈತರೇ ಹೆಚ್ಚಾಗಿದ್ದು, ಇಲ್ಲಿರುವುದು ಮಳೆಯಾಶ್ರಿತ ಭೂಮಿಯಾದ್ದರಿಂದ ಇವರೆಲ್ಲ ಕೇವಲ ಮಳೆಯನ್ನೇ ಅವಲಂಬಿಸಬೇಕಾಗಿದೆ. ಕೆಲ ಯುವಕರು ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುವುದು ಸಾಮಾನ್ಯ.

ಹೋಬಳಿ ಕೇಂದ್ರದ ಸಮಸ್ಯೆಗಳಿಗೆ ಸ್ಪಂದಿಸಿ, ತಕ್ಷಣವೇ ಅಭಿವೃದ್ಧಿ ಕಾರ್ಯಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕೈಗೊಳ್ಳಲಿ ಎಂದು ಗ್ರಾಮದ ಕನ್ನಡ ಕ್ರಾಂತಿದಳ ಯುವಕರ ಸಂಘದ ಅಧ್ಯಕ್ಷ ಜೆ.ಶಿವಕುಮಾರ್, ಪದಾಧಿಕಾರಿಗಳಾದ ಎಸ್.ಜಿ. ತಿಪ್ಪೇಸ್ವಾಮಿ, ಎಸ್.ವಿ.ಸುದರ್ಶನ್, ಎಂ.ಕುಬೇರ, ಎಂ.ನಾಗರಾಜ್, ಇಂದ್ರೇಶ್, ಮೂಗಪ್ಪ, ಜಯರಾಂ, ಪಾಪಣ್ಣ, ಪರಮೇಶ್ವರ್, ಕೆ.ಮಲ್ಲಿಕಾರ್ಜುನ ಮುಂತಾದವರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.