ADVERTISEMENT

‘ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ’

ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಅನಧಿಕೃತ ಶುದ್ಧ ನೀರಿನ ಘಟಕ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 6:01 IST
Last Updated 12 ಅಕ್ಟೋಬರ್ 2017, 6:01 IST

ಬಳ್ಳಾರಿ: ‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ 80ಕ್ಕೂ ಹೆಚ್ಚು ಅಕ್ರಮ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಹತ್ತು ದಿನದೊಳಗೆ ಈ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು’ ಎಂದು ’ಪ್ರಜಾಂದೋಲನ’ ಗ್ರಾಹಕ ಹೋರಾಟದ ಅಧ್ಯಕ್ಷ ಲೋಚನೇಶ ಹೂಗಾರ ಆಗ್ರಹಿಸಿದರು.

‘ನೀರು ಸೇರಿಸಿ ಸಂಸ್ಕರಿಸಿದ ಆಹಾರ ಪದಾರ್ಥಗಳು ಭಾರತೀಯ ಮಾನಕ ಬ್ಯೂರೋ ಮತ್ತು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು 2012ರಲ್ಲಿ ರಾಜ್ಯ ಹೈಕೋರ್ಟ್‌ ಆದೇಶ ನೀಡಿತ್ತು. ಸುಪ್ರೀಂಕೋರ್ಟ್‌ ಕೂಡ 2013ರಲ್ಲಿ ಅದೇ ಆದೇಶವನ್ನು ಎತ್ತಿಹಿಡಿದಿತ್ತು. ಆ ಹಿನ್ನೆಲೆಯಲ್ಲೇ, 2015ರಲ್ಲಿ ಪ್ರತಿ ಜಿಲ್ಲೆಯಲ್ಲೂ ತನಿಖಾ ದಳ ರಚನೆಗೊಂಡರೂ ಅನಧಿಕೃತ ಘಟಕಗಳ ವಿರುದ್ಧ ಕ್ರಮಕೈಗೊಂಡಿಲ್ಲ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖಾ ದಳವು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದ ಅಂಕಿತ ಅಧಿಕಾರಿ ಮತ್ತು ತಾಲ್ಲೂಕು ಮಟ್ಟದ ಆಹಾರ ಸುರಕ್ಷತಾ ಅಧಿಕಾರಿಗಳನ್ನು ವೈಯಕ್ತಿಕವಾಗಿ ಹೊಣೆ ಮಾಡಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಅನಧಿಕೃತ ನೀರಿನ ಘಟಕಗಳು ಕೂಡಲೇ ಅನುಮತಿ ಪಡೆಯಬೇಕು. ಇಲ್ಲವೇ ಮುಚ್ಚಬೇಕು. ಅನುಮತಿ ಇಲ್ಲದೆ ಮಾರಾಟ ಮಾಡುವ ನೀರಿನಿಂದ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ?’ ಎಂದು ಕೇಳಿದರು.

ಹೆಚ್ಚಳ:‘ಗ್ರಾಹಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಅನಧಿ ಕೃತ ನೀರಿನ ಘಟಕಗಳು ಹೆಚ್ಚಾಗುತ್ತಿವೆ. ಟ್ರಸ್ಟ್‌, ತಂದೆ, ತಾಯಿ, ಶಾಸಕರು, ಸಂಸದರ ಹಾಗೂ ದೇವರ ಹೆಸರಿನಲ್ಲಿ ಅರೆ ಸಂಸ್ಕರಿತ ನೀರನ್ನು ಮಾರುವ ಘಟಕಗಳು ಮಿತಿ ಇಲ್ಲದಂತೆ ತಲೆ ಎತ್ತಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಜಿಲ್ಲಾ ಅಂಕಿತ ಅಧಿಕಾರಿ ಕಾನೂನಿನ ಕುಂಟು ನೆಪಗಳನ್ನು ಹೇಳಿಕೊಂಡು ಕ್ರಮ ಕೈಗೊಳ್ಳಲಿಲ್ಲ’ ಎಂದು ದೂರಿದರು.

ಒತ್ತಡ ಹೇರಿದೆವು: ‘ನಂತರ ರಾಜ್ಯ ಆಹಾರ ಸುರಕ್ಷತಾ ಆಯುಕ್ತಾಲಯ ಮತ್ತು ನವದೆಹಲಿಯ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದೆವು. 2016ರ ಮಾರ್ಚ್‌ನಲ್ಲಿ ಪ್ರಾಧಿಕಾರವು ರಾಜ್ಯ ಆಯುಕ್ತಾಲಯಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತು. ಜುಲೈನಲ್ಲಿ ಸ್ಪಂದಿಸಿದ ಆಯುಕ್ತಾಲಯವು 3 ಸುತ್ತೋಲೆ ಹೊರಡಿಸಿತು’ಎಂದು ಮಾಹಿತಿ ನೀಡಿದರು. ‘ನ್ಯಾಯಾಲಯ ಆದೇಶ, ತನಿಖಾ ದಳ ರಚನೆ,ಇಲಾಖೆ ಸುತ್ತೋಲೆ ಬಂದ ಬಳಿಕವೂ ಅಧಿಕಾರಿಗಳು ನಿಷ್ಕ್ರಿಯ
ರಾಗಿದ್ದಾರೆ. ಐಎಸ್‌ಐ ಅನುಮೋದನೆ ಪಡೆದವರು ಮಾತ್ರ 20 ಲೀಟರ್‌ ಕ್ಯಾನ್‌ನಲ್ಲಿ ನೀರು ಮಾರಬೇಕು. ಆದರೆ ಅನುಮೋದನೆ ಪಡೆಯದವರು ಕೂಡ 20 ಲೀಟರ್‌ ಕ್ಯಾನ್‌ನಲ್ಲಿ ನೀರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ 14 ಘಟಕಗಳು ಮಾತ್ರ ಅನುಮೋದನೆ ಪಡೆದಿವೆ. ಹೀಗಾಗಿ 10 ದಿನದ ಗಡುವು ನೀಡಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದರು.

ಘಟಕಗಳು ಎಲ್ಲೆಲ್ಲಿ?; ’ಪ್ರಜಾಂದೋಲನಕ್ಕೆ ದೊರಕಿರುವ ಮಾಹಿತಿ ಪ್ರಕಾರ ಬಳ್ಳಾರಿ, ತೋರಣಗಲ್ಲು ಮತ್ತು ಕುಡಿತಿನಿ ಸುತ್ತ 31, ಹೊಸಪೇಟೆ ತಾಲ್ಲೂಕಿನಲ್ಲಿ 24, ಸಿರುಗುಪ್ಪ ತಾಲ್ಲೂಕಿನಲ್ಲಿ 14, ಸಂಡೂರಿನಲ್ಲಿ 10 ಅನಧಿಕೃತ ನೀರಿನ ಘಟಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ ಲೆಕ್ಕಕ್ಕೆ ಸಿಗದ ಘಟಕಗಳೂ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.