ADVERTISEMENT

ಗಣಿ ಜಿಲ್ಲೆಯಲ್ಲಿ ಇನ್ನು 11 ತಾಲ್ಲೂಕು

ನೂತನ ಮೂರು ತಾಲ್ಲೂಕುಗಳ ಜೊತೆಗೆ ಹಳೇ ತಾಲ್ಲೂಕು ಹರಪನಹಳ್ಳಿ ಸೇರ್ಪಡೆ

ಕೆ.ನರಸಿಂಹ ಮೂರ್ತಿ
Published 6 ಮಾರ್ಚ್ 2018, 10:33 IST
Last Updated 6 ಮಾರ್ಚ್ 2018, 10:33 IST
–ಎಸ್‌.ಪನ್ನರಾಜ್‌
–ಎಸ್‌.ಪನ್ನರಾಜ್‌   

ಬಳ್ಳಾರಿ: ಹರಪನಹಳ್ಳಿ ತಾಲ್ಲೂಕನ್ನು ಜಿಲ್ಲೆಗೆ ಸೇರ್ಪಡೆ ಮಾಡಬೇಕೆಂಬ ರಾಜ್ಯ ಸಚಿವ ಸಂಪುಟದ ತೀರ್ಮಾನದ ಮೂಲಕ ಗಣಿ ನಾಡು ಭರ್ತಿ 11 ತಾಲ್ಲೂಕುಗಳ ವಿಸ್ತಾರ ಜಿಲ್ಲೆಯಾಗಲಿದೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರವೂ ಸೇರಿದರೆ ಜಿಲ್ಲೆಯಲ್ಲಿ 10 ಕ್ಷೇತ್ರಗಳಾಗಲಿವೆ.

ಜಿಲ್ಲೆಯಲ್ಲಿ ಮೊದಲು ಇದ್ದ ಏಳು ತಾಲ್ಲೂಕುಗಳ ಜೊತೆಗೆ, ರಾಜ್ಯ ಸರ್ಕಾರ ರಚಿಸಿರುವ ಕೊಟ್ಟೂರು, ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳು ಕಾರ್ಯಾರಂಭ ಮಾಡಬೇಕಾಗಿದೆ. ಕೊಟ್ಟೂರು ತಾಲ್ಲೂಕು ಕೆಲವು ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದೆ. ಉಳಿದ ಎರಡು ತಾಲ್ಲೂಕುಗಳ ಉದ್ಘಾಟನೆ ಆಗಬೇಕಾಗಿದೆ. ಇದೇ ಸನ್ನಿವೇಶದಲ್ಲಿ ಹಳೇ ಬಳ್ಳಾರಿಗೆ ಸೇರಿದ್ದ ಹರಪನಹಳ್ಳಿ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಮತ್ತೆ ಮೂಲ ಜಿಲ್ಲೆಗೇ ಬರಲಿರುವುದು ಮಹತ್ವದ ಬೆಳವಣಿಗೆಯಾಗಿದೆ.

ವಿಧಾನಸಭಾ ಕ್ಷೇತ್ರವೂ ಹೆಚ್ಚು: 1997ರಲ್ಲಿ ಹರಪನಹಳ್ಳಿಯನ್ನು ದಾವಣಗೆರೆಗೆ ಸೇರಿದ ಬಳಿಕ ಬಳ್ಳಾರಿಯಲ್ಲಿ ಕೇವಲ ಏಳು (ಸಿರುಗುಪ್ಪ, ಬಳ್ಳಾರಿ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನಹಳ್ಳಿ) ತಾಲ್ಲೂಕುಗಳು ಇದ್ದವು.

ADVERTISEMENT

2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕುರುಗೋಡು, ಕೊಟ್ಟೂರು, ಬಳ್ಳಾರಿ ಮತ್ತು ಹೊಸಪೇಟೆ ಅಸ್ತಿತ್ವ ಕಳೆದುಕೊಂಡು, ಬಳ್ಳಾರಿ ನಗರ, ಗ್ರಾಮೀಣ, ವಿಜಯನಗರ ಮತ್ತು ಕಂಪ್ಲಿ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು. ಅವುಗಳೊಂದಿಗೆ ಹಳೇ ಕ್ಷೇತ್ರಗಳಾದ ಸಿರುಗುಪ್ಪ, ಸಂಡೂರು, ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರಿ ಒಂಬತ್ತು ಕ್ಷೇತ್ರಗಳಾದವು. ಈಗ ಹರಪನಹಳ್ಳಿಯೂ ಸೇರಲಿರುವು
ದರಿಂದ ಜಿಲ್ಲೆಯಲ್ಲಿ ಒಟ್ಟು ಹತ್ತು ಕ್ಷೇತ್ರಗಳಾಗಲಿವೆ.

ದೂರದ ಭಾರ: ಹರಪನಹಳ್ಳಿ ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಹೆಚ್ಚು ದೂರ ಇರುವುದರಿಂದ ದಾವಣಗೆರೆ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಅದೇ ವಿಷಯ ಮುನ್ನೆಲೆಗೆ ಬರಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್, ‘ಈ ಹಿಂದೆಯೂ ಹರಪನಹಳ್ಳಿ ಬಳ್ಳಾರಿಗೆ ಸೇರಿತ್ತು. ಹಿಂದೆ ಹೇಗೆ ಆಡಳಿತ ನಡೆಯುತ್ತಿತ್ತೋ ಸೇರ್ಪಡೆ ಬಳಿಕವೂ ಅದೇ ರೀತಿ ಆಡಳಿತ ನಡೆಯಲಿದೆ. ಸರ್ಕಾರದ ಸೂಚನೆಗೆ ಜಿಲ್ಲಾಡಳಿತ ಎದುರು ನೋಡುತ್ತಿದೆ’ ಎಂದು ಹೇಳಿದರು.

‘ತಾಲ್ಲೂಕು ಸೇರ್ಪಡೆ ಸಂಬಂಧ ರಾಜ್ಯ ಸರ್ಕಾರ ಕರಡು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ಕೊಡುತ್ತದೆ. ನಂತರ ಅಂತಿಮ ಅಧಿಸೂಚನೆ ಪ್ರಕಟಿಸುತ್ತದೆ’ ಎಂದು ಹೇಳಿದರು.
***
ಬಳ್ಳಾರಿ ಜಿಲ್ಲೆ ವಿಭಜನೆ?

ಬಳ್ಳಾರಿ: ತಾಲ್ಲೂಕು ಮತ್ತು ವಿಧಾನಸಭಾ ಕ್ಷೇತ್ರಗಳು ಹೆಚ್ಚಿರುವುದು ಮತ್ತು ಹರಪನಹಳ್ಳಿ ತಾಲ್ಲೂಕು ಜಿಲ್ಲಾ ಕೇಂದ್ರದಿಂದ 130 ಕಿ.ಮೀ ದೂರದಲ್ಲಿರುವ ಕಾರಣದಿಂದ, ಜನರ ಓಡಾಟ ಮತ್ತು ಆಡಳಿತಾತ್ಮಕ ಕಾರಣಕ್ಕಾಗಿ ಜಿಲ್ಲೆಯಲ್ಲಿ ವಿಭಜಿಸುವ ಅಗತ್ಯವೂ ಏರ್ಪಡಲಿದೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ಮಾತೂ ಇದೇ ವೇಳೆ ಕೇಳಿಬಂದಿದೆ.
***
ಸರ್ಕಾರದ ನಿರ್ಧಾರದಿಂದ ಜನರಿಗೆ ನ್ಯಾಯ ಸಿಕ್ಕಿದೆ. ಆದರೆ, ಮೀಸಲಾತಿಯ ನ್ಯಾಯಕ್ಕಾಗಿಯೂ ತಾಲ್ಲೂಕಿನ ಜನ ಹೋರಾಟವನ್ನು ಮುಂದುವರಿಸಬೇಕು.
– ಎಸ್‌.ಪನ್ನರಾಜ್‌, ಹೈ– ಕ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.