ADVERTISEMENT

ಗುರಿ ಹೊಂದಿದಲ್ಲಿ ಯಶಸ್ಸು ಸಾಧ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:00 IST
Last Updated 3 ಅಕ್ಟೋಬರ್ 2011, 8:00 IST

ಬಳ್ಳಾರಿ: ಶಿಸ್ತು, ಸುಯ ಪಾಲನೆ, ಏಕಾಗ್ರತೆ ಮತ್ತು ಗುರಿ ಇದ್ದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸುಲಭವಾಗಿ ಯಶಸ್ಸನ್ನು ಸಾಧಿಸಬಹುದು ಎಂದು ಮೇಯರ್ ಪಾರ್ವತಿ ಇಂದುಶೇಖರ್ ಅಭಿಪ್ರಾಯಪಟ್ಟರು.ಡಿಆರ್‌ಕೆ ರಂಗಸಿರಿ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸ್ಫರ್ಧಾತ್ಮಕ ಮನೋಭಾವ ಇರಬೇಕು. ಆಧುನೀಕತೆ ಹಾಗೂ ತಾಂತ್ರಿಕ ಬೆಳವಣಿಗೆ ಮಧ್ಯೆ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ನಿರಂತರ ಶ್ರಮಪಡಬೇಕು ಎಂದರು.ಸಮಾಜದಲ್ಲಿ ಅನೇಕ ಶ್ರೀಮಂತ ರಿದ್ದಾರೆ. ಆಡಂಬರದ ಬದುಕು, ಐಷಾರಾಮಿ ಜೀವನಕ್ಕಾಗಿ ದುಂದು ವೆಚ್ಚ ಮಾಡುವವರು ಇದ್ದಾರೆ. ಆದರೆ, ಕಲಾ ಕುಟುಂಬದ  ಹಿನ್ನೆಲೆಯ ಪ್ರಾಮಾಣಿಕವಾಗಿ ದುಡಿದಿರುವವರ ಹಣವನ್ನು ಡಿಆರ್‌ಕೆ ರಂಗಸಿರಿ ಟ್ರಸ್ಟ್ ವಿದ್ಯಾರ್ಥಿ ವೇತನಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳು ಸಮಾಜಮುಖಿ ಆಗಿ, ವಿದ್ಯಾರ್ಥಿ ವೇತನವನ್ನು ಸದುಪ ಯೋಗ ಪಡಿಸಿಕೊಂಡು  ಜೀವನದಲ್ಲಿ  ಯಶಸ್ಸು ಸಾಧಿಸಬೇಕು. ಉತ್ತಮ ನಾಗರಿಕರಾಗಿ ಹೊರ ಹೊಮ್ಮಿ, ಬಡ ವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಈ ವರ್ಷ ನಾಲ್ವರು ವಿದ್ಯಾರ್ಥಿಗಳಿಗೆ ಟ್ರಸ್ಟ್ ವಿದ್ಯಾರ್ಥಿವೇತನ ನೀಡುತ್ತಿದೆ. ಶೈಕ್ಷಣಿಕ ಅರ್ಹತೆ, ಬಡತನ ಮತ್ತು ಸಾಧನೆ ಆಧರಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಡಿ. ಮಹೇಂದ್ರನಾಥ್ ತಿಳಿಸಿದರು.

ಡಿಪ್ಲೊಮಾದಲ್ಲಿ ಶೇ. 81.49 ಅಂಕ ಪಡೆದಿರುವ ಗೀತಾ, ಸಂಡೂರಿನ ಶ್ರೀನಿಧಿ, ಬಿ.ವಿ. ಪ್ರಜ್ವಲ್, ಲಕ್ಷ್ಮಿ ನಾರಾಯಣ ರೆಡ್ಡಿ ವಿದ್ಯಾರ್ಥಿವೇತನ ಪಡೆಯಲು ಆಯ್ಕೆಯಾಗಿದ್ದಾರೆ.ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಶಿವಶಂಕರ ನಾಯ್ಡು ಪ್ರಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟ್‌ನ ಅಧ್ಯಕ್ಷ ವೈ.ಎಂ. ಬಸವರಾಜ್, ನೀಲಮ್ಮ ಬಸವರಾಜ್,  ಸದಸ್ಯ ಸುದೀಪ, ನಿವೃತ್ತ ಪ್ರಾಚಾರ್ಯ ಫ್ರಾನ್ಸಿಸ್ ಜೇವಿರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.