ADVERTISEMENT

ಗೆಲುವಿಗೆ ಮೆಟ್ಟಿಲಾದ ಸಮಾಜ ಸೇವೆ

ಜನಾರ್ದನ ರೆಡ್ಡಿಯಿಂದ ಶಾಸಕನಾದೆ: ವಿಜಯನಗರ ಕ್ಷೇತ್ರದಿಂದ ಎರಡು ಸಲ ಗೆದ್ದಿರುವ ಆನಂದ್‌ ಸಿಂಗ್‌ ಮನದಾಳ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 2 ಮಾರ್ಚ್ 2018, 10:39 IST
Last Updated 2 ಮಾರ್ಚ್ 2018, 10:39 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ: ‘ಮೊದಲಿನಿಂದಲೂ ನಾನು ಖಾಸಗಿ ಬಸ್ಸಿನ ವ್ಯವಹಾರ, ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಅದರ ಜತೆಗೆ ಸಮಾಜ ಸೇವೆ ಮಾಡಿಕೊಂಡಿದ್ದೆ. 2008ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಭರಮನಗೌಡ ಅವರಿಗೆ ಬಿಜೆಪಿ ಟಿಕೆಟ್‌ ಕೊಡಲಾಗಿತ್ತು. ಜನಾರ್ದನ ರೆಡ್ಡಿ ಅವರು ಕೊನೆಯ ಕ್ಷಣದಲ್ಲಿ ಅವರನ್ನು ಬದಲಿಸಿ ನನಗೆ ಟಿಕೆಟ್‌ ಕೊಟ್ಟರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆದ್ದೆ’

ಕಾಂಗ್ರೆಸ್‌ ಮುಖಂಡ ಆನಂದ್‌ ಸಿಂಗ್‌ ಅವರ ಮಾತುಗಳಿವು. 2008, 2013ರ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಜಯನಗರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಆನಂದ್‌ ಸಿಂಗ್‌ ಇತ್ತೀಚೆಗಷ್ಟೇ ಆ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಗುರುವಾರ ದಿನವಿಡೀ ವಿವಿಧ ಕಡೆ ಏರ್ಪಡಿಸಿದ್ದ ಸಭೆಗಳಲ್ಲಿ ಪಾಲ್ಗೊಂಡು ಸ್ವಲ್ಪ ದಣಿದವರಂತೆ ಕಂಡಿದ್ದ ಅವರು ಸಂಜೆ ನಗರದ ಪ್ರಿಯದರ್ಶಿನಿ ಪ್ರೈಡ್‌ ಹೋಟೆಲ್‌ ಎದುರಿನ ಹುಲ್ಲು ಹಾಸಿನ ಮೇಲೆ ಕುಳಿತು ಸಮಾಧಾನದಿಂದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ
ದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರುವುದರ ಜತೆಗೆ ಸಚಿವರಾಗುವ ಅದೃಷ್ಟವೂ ಆನಂದ್‌ ಸಿಂಗ್‌ ಅವರಿಗೆ ಒಲಿಯಿತು. ಅದರ ಬೆನ್ನಲ್ಲೇ ಅಕ್ರಮ ಗಣಿಗಾರಿಕೆಯ ಆರೋಪದ ಮೇಲೆ ಸೆರೆಮನೆವಾಸ ಕೂಡ ಅನುಭವಿಸಿದರು. ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್‌ ಸೇರಿದ್ದಾರೆ.

ಹೀಗೆ ಹಲವು ಏಳು–ಬೀಳುಗಳನ್ನು ಕಂಡಿರುವ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರೇ ಹೇಳುವ ಪ್ರಕಾರ, ‘ಆನಂದ್‌ ಸಿಂಗ್‌ ನಮ್ಮ ಜೇಬಿನಲ್ಲಿದ್ದಾರೆ. ಯಾವಾಗ ಬೇಕಾದರೂ ನಮಗೆ ಸಿಗುತ್ತಾರೆ ಎನ್ನುವಷ್ಟರ ಮಟ್ಟಿಗೆ ಜನರಿಗೆ ನನ್ನ ಮೇಲೆ ಭರವಸೆ ಇದೆ. ಅದೇ ನನಗೆ ಪ್ಲಸ್‌ ಪಾಯಿಂಟ್‌. ಎರಡನೇ ಬಾರಿ ಈ ಕಾರಣಕ್ಕಾಗಿಯೇ ಗೆದ್ದೆ’ ಎಂದರು.

ADVERTISEMENT

‘ನನಗೆ ವ್ಯವಹಾರ ಬಿಟ್ಟರೆ ಬೇರೆ ಪ್ರಪಂಚವೇ ಗೊತ್ತಿರಲಿಲ್ಲ. ಆಗಾಗ ಆರೋಗ್ಯ ಶಿಬಿರ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಇತರೆ ಸಮಾಜ ಸೇವೆ ಮಾಡುತ್ತಿದ್ದೆ. ಅದರ ಮೂಲಕ ಜನರಿಗೆ ಸ್ವಲ್ಪ ಪರಿಚಯವಾಗಿದ್ದೆ. ರಾಜಕೀಯದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಯಾವುದೇ ಪಕ್ಷದ ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡಿರಲಿಲ್ಲ. ನನ್ನ ಜಗತ್ತೇ ಬೇರೆ ಇತ್ತು. ಆದರೆ, ಜನಾರ್ದನ ರೆಡ್ಡಿ
ಅವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದೆ. ಈಗಾಗಲೇ ಭರಮನಗೌಡ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ. ಅವರನ್ನು ಬದಲಿಸುವುದು ಬೇಡ ಎಂದು ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದೆ. 2013ರ ಚುನಾವಣೆಗೂ ಸ್ಪರ್ಧಿಸುವ ಆಸಕ್ತಿ ಇರಲಿಲ್ಲ. ಆಗ ರಾಜ್ಯ ನಾಯಕರು ಒತ್ತಡ ಹೇರಿ ಸ್ಪರ್ಧಿಸಲೇಬೇಕು ಎಂದು ಹೇಳಿದರು. ಆ ಚುನಾವಣೆಗೆ ನಿಂತು ಗೆದ್ದೆ’
ಎಂದು ರಾಜಕೀಯ ಹಾದಿ ನೆನಪಿಸಿಕೊಂಡರು.

‘ನಮ್ಮ ಮನೆತನದವರು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲೇ ಇದ್ದರು. ನಮ್ಮ ತಂದೆ ಕೆಲಕಾಲ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಸಂಸದ ಬಿ. ಶ್ರೀರಾಮುಲು ಅವರ ಪರಿಚಯವಾಯಿತು. ಅವರಿಂದ ಜನಾರ್ದನ ರೆಡ್ಡಿ ಅವರಿಗೆ ಪರಿಚಯವಾದೆ. ನಾನು ಮಾಡುತ್ತಿರುವ ಸಮಾಜ ಸೇವೆಯನ್ನು ರೆಡ್ಡಿ ಅವರು ಸೂಕ್ಷ್ಮವಾಗಿ ಗಮನಿಸಿದ್ದರು’ ಎಂದು ಹೇಳಿ ಮಾತಿಗೆ ವಿರಾಮ ಹೇಳಿದರು.
***
‘ಅಭಿವೃದ್ಧಿಯೇ ನನ್ನ ಅಜೆಂಡಾ’

‘ಅಭಿವೃದ್ಧಿಯೇ ನನ್ನ ಅಜೆಂಡಾ. ಅದು ಬಿಟ್ಟರೆ ಬೇರೇನೂ ನನಗೆ ಗೊತ್ತಿಲ್ಲ. ನಾನು ಶಾಸಕನಾದ ಬಳಿಕ ಸುಸಜ್ಜಿತವಾದ ಬಸ್‌ ನಿಲ್ದಾಣ, ಒಳಾಂಗಣ ಕ್ರೀಡಾಂಗಣ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇನೆ. ಈ ಮೊದಲು ನಗರದಲ್ಲಿ ರಸ್ತೆಗಳು ಹೇಗಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಆನಂದ್‌ ಸಿಂಗ್‌ ಹೇಳಿದರು.

‘ನನ್ನ ಕಾಲದಲ್ಲಿ ಕಣ್ಣಿಗೆ ಕಾಣುವಂತಹ ಕೆಲಸಗಳಾಗಿವೆ. ಏತ ನೀರಾವರಿ, ಶಾಲಾ–ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದೇನೆ. ಅಭಿವೃದ್ಧಿಗೆ ಕೊನೆ ಎಂಬುದೇ ಇಲ್ಲ. ಅದು ನಿರಂತರವಾಗಿ ನಡೆಯುವಂತಹದ್ದು. ಅದನ್ನು ಹಾಗೆಯೇ ಮುಂದುವರೆಸುತ್ತೇನೆ’ ಎಂದರು.
***
ನಾನೆಂದೂ ದ್ವೇಷದ ರಾಜಕೀಯ ಮಾಡಿಲ್ಲ. ಹೀಗಾಗಿ ಎಲ್ಲ ವರ್ಗದವರಿಗೆ ನನ್ನ ಮೇಲೆ ಗೌರವ ಇದೆ. ಯಾರೇ ನನ್ನನ್ನು ಟೀಕಿಸಿದರೂ ಅದು ಕ್ಷಣಿಕ
ಆನಂದ್‌ ಸಿಂಗ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.