ADVERTISEMENT

ಗ್ರಾಮೀಣದಿಂದ ಕೂಡ್ಲಿಗಿಗೆ ಗೋಪಾಲಕೃಷ್ಣ

ಹೊರಗಿನವರಿಗೆ ಮಣೆ ಹಾಕಿದ ಜೆಡಿಎಸ್‌

ಕೆ.ನರಸಿಂಹ ಮೂರ್ತಿ
Published 21 ಏಪ್ರಿಲ್ 2018, 6:01 IST
Last Updated 21 ಏಪ್ರಿಲ್ 2018, 6:01 IST

ಬಳ್ಳಾರಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರಕದೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದ ಎನ್.ವೈ.ಗೋಪಾಲಕೃಷ್ಣ ಅವರಿಗೆ ಬಿಜೆಪಿ ಕೂಡ್ಲಿಗಿಯಿಂದ ಸ್ಪರ್ಧಿಸಲು ಟಿಕೆಟ್‌ ನೀಡಿದೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅಲ್ಲಿಂದ ಗ್ರಾಮೀಣ ಕ್ಷೇತ್ರಕ್ಕೆ ವಲಸೆ ಹೋಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿರುವ ಸಂದರ್ಭದಲ್ಲೇ, ಗೋಪಾಲಕೃಷ್ಣ ಅವರೂ ಆ ಕ್ಷೇತ್ರ ಬಿಟ್ಟು ಕೂಡ್ಲಿಗಿಗೆ ಬಂದಿರುವುದು ವಿಶೇಷ.

ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹೊಸಪೇಟೆಯವರು. ಗೋಪಾಲಕೃಷ್ಣ ಮೊಳಕಾಲ್ಮೂರಿನವರು. ಇವರ ನಡುವೆ ಜೆಡಿಎಸ್‌ ಅಭ್ಯರ್ಥಿಯಾಗಿರುವ ಎನ್.ಟಿ.ಬೊಮ್ಮಣ್ಣ ಮಾತ್ರ ಸ್ಥಳೀಯರು. ಈ ಮೂವರ ನಡುವೆ ಹಣಾಹಣಿ ನಡೆಯಬೇಕಾಗಿದೆ.

ADVERTISEMENT

ಪಕ್ಷಾಂತರಿಗಳಿಗೆ ಟಿಕೆಟ್‌: ಟಿಕೆಟ್‌ ವಂಚಿತರಾದ ಅನ್ಯಪಕ್ಷಗಳ ಆಕಾಂಕ್ಷಿಗಳನ್ನು ಸೆಳೆದು ಜೆಡಿಎಸ್‌ ಟಿಕೆಟ್‌ ನೀಡಿ ಬಂಡಾಯದ ಲಾಭ ಪಡೆಯಲು ಮುಂದಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಸ್‌.ಕೃಷ್ಣಾನಾಯ್ಕ ಅವರಿಗೆ ಜೆಡಿಎಸ್‌ ಟಿಕೆಟ್‌ ದೊರಕಿದೆ. ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಇತ್ತೀಚೆಗಷ್ಟೇ ಅವರು ರಾಜೀನಾಮೆ ನೀಡಿದ್ದರು. ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅವರು, ಕಾಂಗ್ರೆಸ್‌ನ ಎಸ್‌.ಭೀಮಾನಾಯ್ಕ ಮತ್ತು ಬಿಜೆಪಿಯ ನೇಮಿರಾಜನಾಯ್ಕರಂಥ ಅನುಭವಿಗಳೊಂದಿಗೆ ಸೆಣೆಸಾಡಬೇಕಾಗಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ ಪಡೆದಿರುವ ಮೀನಹಳ್ಳಿ ತಾಯಣ್ಣ ಒಮ್ಮೆ ಸ್ಪರ್ಧಿಸಿ ಸೋತವರು. ಕ್ಷೇತ್ರದಲ್ಲಿ ಈಗಾಲೇ ಪ್ರಚಾರ ಆರಂಭಿಸಿರುವ ಅವರು, ಕಾಂಗ್ರೆಸ್‌ನ ನಾಗೇಂದ್ರ ಮತ್ತು ಬಿಜೆಪಿಯ ಸಣ್ಣ ಫಕ್ಕೀರಪ್ಪ ಎದುರು ಗೆಲುವಿಗೆ ಯಾವ ತಂತ್ರವನ್ನು ಅನುಸರಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಎದುರಾಳಿಗಳ ಪೈಕಿ ಒಬ್ಬರು ಹೊರಗಿನವರು. ಸ್ಥಳೀಯರೇ ಆದ ನಾಗೇಂದ್ರ ಅವರಿಂದ ಹೆಚ್ಚಿನ ಪೈಪೋಟಿ ಎದುರಾಗಬಹುದು. 2014ರ ಉಪಚುನಾವಣೆಗೆ ಮುನ್ನ ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಈ ಬಾರಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಟಿಕೆಟ್‌ ಘೋಷಣೆಗೂ ಮುನ್ನವೇ ನಗರ ಕ್ಷೇತ್ರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಮೊಹ್ಮದ್‌ ಇಕ್ಬಾಲ್‌ ಹೊತುರ್ ನಗರದವರೇ ಆದರೂ ಜನರ ನಡುವೆ ಕಾಣಿಸಿಕೊಂಡಿಲ್ಲ ಎಂಬ ಆರೋಪದ ಜೊತೆಗೇ ಕಣಕ್ಕೆ ಇಳಿದಿದ್ದಾರೆ. ಅವರ ಎದುರಿಗೆ ಕಾಂಗ್ರೆಸ್‌ನ ಅನಿಲ್‌ಲಾಡ್‌ ಮತ್ತು ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ ಇದ್ದಾರೆ.

ಮಾದಿಗರ ಮತ ಸೆಳೆಯುವ ಯತ್ನ

ಬಳ್ಳಾರಿ: ಹಡಗಲಿಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಪುತ್ರೇಶ್‌ ಅವರಿಗೆ ಟಿಕೆಟ್‌ ನೀಡಿರುವ ಜೆಡಿಎಸ್‌ ಆ ಮೂಲಕ ಕಾಂಗ್ರೆಸ್‌ನ ಪಿ.ಟಿ.ಪರಮಶ್ವರ ನಾಯ್ಕ ಮತ್ತು ಬಿಜೆಪಿಯ ಚಂದ್ರಾನಾಯ್ಕ ಅವರಂಥ ಘಟಾನುಘಟಿಗಳ ಜೊತೆಗೆ ಪೈಪೋಟಿಗೆ ಇಳಿದಿದೆ ಎಂಬುದು ಮೇಲುನೋಟಕ್ಕೆ ಕಾಣುವ ಅಂಶ.

ಆದರೆ, ಪ್ರಗತಿಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಪುತ್ರೇಶ್‌ ಮಾದಿಗ ಸಮುದಾಯದವರು ಎಂಬುದನ್ನು ಪರಿಗಣಿಸಿದರೆ ಜೆಡಿಎಸ್‌ ತಂತ್ರ ಬೆಳಕಿಗೆ ಬರುತ್ತದೆ.

ಹಡಗಲಿಯಲ್ಲಿ ಸುಮಾರು 36 ಸಾವಿರ ಮಾದಿಗ ಮತದಾರರಿದ್ದು ಅವರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದನ್ನು ಗಮನಿಸಿಯೇ ಪುತ್ರೇಶ್‌ಗೆ ಅವಕಾಶ ನೀಡಲಾಗಿದೆ. ಆ ಮೂಲಕ ಎರಡು ಪಕ್ಷಗಳಿಗಿಂತ ಜೆಡಿಎಸ್‌ ಭಿನ್ನ ಹಾದಿ ತುಳಿದಿದೆ.

ಹಿಂದಿನ ಚುನಾವಣೆಗೂ ಮುನ್ನ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಪುತ್ರೇಶ್, ಆಗ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷ ತ್ಯಜಿಸಿದ್ದರು. ಇತ್ತೀಚಿನವರೆಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇಲ್ಲಿಯೂ ಟಿಕೆಟ್‌ ಕೈ ತಪ್ಪುವ ಮುನ್ಸೂಚನೆ ಅರಿತು ಮತ್ತೆ ಜೆಡಿಎಸ್ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡನಿಗೆ ಜೆಡಿಎಸ್‌ ಟಿಕೆಟ್‌ !

ಬಳ್ಳಾರಿ: ಜೆಡಿಎಸ್‌ ಶುಕ್ರವಾರ ಪ್ರಕಟಿಸಿದ ತನ್ನ ಎರಡನೇ ಪಟ್ಟಿಯಲ್ಲಿ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಬಿ.ನಾರಾಯಣಪ್ಪ ಅವರಿಗೆ ಟಿಕೆಟ್‌ ಘೋಷಿಸಿದೆ.

ರಾಮಸಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅವರು ಮೂಲತಃ ಜೆಡಿಎಸ್‌ನವರೇ ಆಗಿದ್ದರೂ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ಆ ಪಕ್ಷದಿಂದ ಟಿಕೆಟ್‌ ನಿರೀಕ್ಷಿಸಿದ್ದರು. ‘ಕಾಂಗ್ರೆಸ್‌ ಟಿಕೆಟ್‌ ದೊರಕಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ ಮುಖಂಡರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ನಾನು ನಿರಾಕರಿಸಿದ್ದೆ. ಆದರೆ ಈಗ ಯಾವುದೋ ವಿಶ್ವಾಸದ ಮೇಲೆ ಟಿಕೆಟ್‌ ಘೋಷಿಸಿದ್ದಾರೆ. ಆ ಬಗ್ಗೆ ಯಾರೂ ನನ್ನೊಂದಿಗೆ ಚರ್ಚಿಸಿರಲಿಲ್ಲ’ ಎಂದು ನಾರಾಯಣಪ್ಪ ’ಪ್ರಜಾವಾಣಿ’ಗೆ ತಿಳಿಸಿದರು.

‘ನನಗೆ ಕಾಂಗ್ರೆಸ್‌ ಬಿಟ್ಟು ಬರಲು ಮನಸಿಲ್ಲ. ದಿಢೀರನೆ ಟಿಕೆಟ್‌ ನಿರಾಕರಿಸಿದರೆ ಮುಜುಗರವಾಗಬಹುದು ಎಂಬ ಕಾರಣಕ್ಕೆ ಶನಿವಾರ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ನಿರಾಕರಣೆ ನಿರ್ಧಾರವನ್ನು ಪ್ರಕಟಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.