ADVERTISEMENT

ಗ್ರಾಮೀಣ ಅಂಚೆ ಜೀವ ವಿಮಾ ಮೇಳ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:15 IST
Last Updated 14 ಸೆಪ್ಟೆಂಬರ್ 2011, 5:15 IST

ಕೂಡ್ಲಿಗಿ: ನಾವು ಖರೀದಿಸುವ ಪ್ರತಿಯೊಂದು ದುಬಾರಿ ವಸ್ತುಗಳಿಗೂ ವಿಮೆ ಮಾಡಿಸುತ್ತೇವೆ, ಆದರೆ ಅತಿ ಮುಖ್ಯವಾದ ಜೀವಕ್ಕೆ ಮಾತ್ರ ವಿಮೆ ಮಾಡಿಸುವುದನ್ನು ಮರೆಯುತ್ತೇವೆ ಎಂದು ಧಾರವಾಡ ಗ್ರಾಮೀಣ ಅಂಚೆ ಜೀವ ವಿಮೆಯ ಉಪನಿರ್ದೇಶಕ ನಾನಜಿಗಿ ತಿಳಿಸಿದರು.

ಅವರು ಸೋಮವಾರ ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಅಂಚೆ ಜೀವ ವಿಮಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮೀಣ ಭಾಗದಲ್ಲೂ ಜೀವ ವಿಮೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಅಂಚೆ ಪಾಲಕರು ಗ್ರಾಮೀಣ ಜನತೆಗೆ ಈ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಶ್ರಮಿಸಬೇಕೆಂದು ಅವರು ಸಲಹೆ ನೀಡಿದರು. ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ 24 ಜನ ಮಾತ್ರ ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆಂದು ಅವರು ಹೇಳಿದರು.

ಪ್ರತಿಯೊಬ್ಬ ಪ್ರಜೆಯೂ ಜೀವ ವಿಮೆಯ ಸೌಲಭ್ಯವನ್ನು ಪಡೆಯಬೇಕು ಎಂಬುದು ಅಂಚೆ ಇಲಾಖೆಯ ಉದ್ದೇಶವಾಗಿದೆ ಎಂದರು.

ಬಳ್ಳಾರಿ ಜಿಲ್ಲಾ ಅಂಚೆ ಅಧೀಕ್ಷಕ ಶ್ರೀನಿವಾಸುಲು, ಸರ್ಕಾರ ಕೊಡುವ ಸೌಲಭ್ಯಗಳನ್ನು ತೆಗೆದುಕೊಳ್ಳಲು ಬಡವರು ಮತ್ತು ಕಡುಬಡವರು ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಬೇಕಾಗಿದೆ ಎಂದರು.

ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಈ ಸೌಲಭ್ಯವನ್ನು ಕುರಿತು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ವೇದಿಕೆಯಲ್ಲಿ ಅಂಚೆ ಜೀವ ವಿಮೆ ಅಧಿಕಾರಿ ರೆಡ್ಡಿ, ಅಂಚೆ ನಿರೀಕ್ಷಕ ಕೆಂಚಪ್ಪ, ಅಂಚೆ ಪಾಲಕ ಗೋವಿಂದ ರಾಜು, ಎಸ್.ಎ.ವೀರಣ್ಣ ಹಾಜರಿದ್ದರು.

ಅಂಚೆ ಜೀವ ವಿಮೆಯ ಅಭಿವೃದ್ಧಿ ಅಧಿಕಾರಿ ಮಂಜುನಾಥ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಅಂಚೆ ಅಧಿಕಾರಿ ಅಂಚೆ ಕೊಟ್ರೇಶ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮ ದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮೀಣ ಅಂಚೆ ಪಾಲಕರು ಉಪಸ್ಥಿತರ್ದ್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.