ADVERTISEMENT

ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ

ಡಿಜಿಟಲ್‌ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 6:50 IST
Last Updated 20 ಮಾರ್ಚ್ 2018, 6:50 IST
ಹೊಸಪೇಟೆಯ ಎಂ.ಜೆ. ನಗರದಲ್ಲಿ ಡಿಜಿಟಲ್‌ ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ (ಬಲದಿಂದ ಎರಡನೆಯವರು) ಅವರು ಅಲ್ಲಿನ ಮಕ್ಕಳ ಆಟದ ಸ್ಥಳವನ್ನು ಪರಿಶೀಲಿಸಿದರು   –ಪ್ರಜಾವಾಣಿ ಚಿತ್ರ
ಹೊಸಪೇಟೆಯ ಎಂ.ಜೆ. ನಗರದಲ್ಲಿ ಡಿಜಿಟಲ್‌ ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ (ಬಲದಿಂದ ಎರಡನೆಯವರು) ಅವರು ಅಲ್ಲಿನ ಮಕ್ಕಳ ಆಟದ ಸ್ಥಳವನ್ನು ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ಎಂ.ಜೆ. ನಗರದಲ್ಲಿ ನಿರ್ಮಿಸಿರುವ ಡಿಜಿಟಲ್‌ ಅಂಗನವಾಡಿ ಕೇಂದ್ರವನ್ನು ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿ, ‘ಡಿಜಿಟಲ್‌ ಅಂಗನವಾಡಿ ಕೇಂದ್ರದ ವಾಸ್ತುಶಿಲ್ಪ ಅತ್ಯುತ್ತಮವಾಗಿದೆ. ಎಳೆಯ ಮಕ್ಕಳು ಕೇಂದ್ರದಲ್ಲಿ ಕಾಲ ಕಳೆಯಲು ಬೇಕಾದ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಿದರೆ ಒಳ್ಳೆಯ ಕಾರ್ಯ ಮಾಡಬಹುದು ಎನ್ನುವುದಕ್ಕೆ ಈ ಕೇಂದ್ರವೇ ಸಾಕ್ಷಿ’ ಎಂದು ಹೇಳಿದರು.

‘ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್ ಅವರು ಬೆನ್ನು ಬಿದ್ದು ಡಿಜಿಟಲ್‌ ಅಂಗನವಾಡಿ ಕೇಂದ್ರ ಮಾಡಿಸಿದ್ದಾರೆ. ನಿಜಕ್ಕೂ ಅವರೊಬ್ಬ ಉತ್ತಮ ಕೆಲಸಗಾರರು. ಇತರೆ ಸದಸ್ಯರಿಗೆ ಅವರು ಮಾದರಿಯಾಗಿದ್ದಾರೆ. ಎಂ.ಜೆ. ನಗರದಂತೆ ಇತರೆ ವಾರ್ಡ್‌ಗಳಲ್ಲಿ ಡಿಜಿಟಲ್‌ ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗಬೇಕು. ಅದಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಡಿಜಿಟಲ್‌ ಅಂಗನವಾಡಿ ಕೇಂದ್ರವೆಂದು ಕರೆಸಿಕೊಳ್ಳಲು ಏನೇನು ಬೇಕೋ ಅವುಗಳೆಲ್ಲ ಇಲ್ಲಿವೆ. ಜಿಲ್ಲಾ ಆಡಳಿತ ಹಾಗೂ ನಗರಸಭೆಯಿಂದ ನೆರವು ಸಿಕ್ಕಿದೆ. ಜತೆಗೆ ಕಾಮತ್‌
ಅವರು ದಾನಿಗಳ ನೆರವು ಪಡೆದು ಆದಷ್ಟು ಶೀಘ್ರದಲ್ಲಿ ಕೆಲಸ ಪೂರ್ಣಗೊಳಿಸಲು ಶ್ರಮಿಸಿದ್ದಾರೆ’ ಎಂದರು.

‘ವಿಶ್ವವಿಖ್ಯಾತ ಹಂಪಿ ಸನಿಹದಲ್ಲೇ ಇರುವುದರಿಂದ ಹೊಸಪೇಟೆ ನಗರ ಭವಿಷ್ಯದಲ್ಲಿ ಸಾಕಷ್ಟು ಬೆಳೆಯಲಿದೆ. ಪ್ರವಾಸೋದ್ಯಮ ತಾಣವಾಗಿರುವ ಈ ನಗರದಲ್ಲಿ ಮೂಲಸೌಕರ್ಯ ಕಲ್ಪಿಸಿ ಸಮಗ್ರ ಅಭಿವೃದ್ಧಿ ಮಾಡಬೇಕಿದೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಆಡಳಿತ ಸೇರಿಕೊಂಡು ಜನರ ಅಗತ್ಯತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕಿದೆ’ ಎಂದು ಹೇಳಿದರು.

ಚಂದ್ರಕಾಂತ ಕಾಮತ್‌ ಮಾತನಾಡಿ, ‘ಗುಜರಾತ್‌ನ ವಡೋದರಲ್ಲಿ ಡಿಜಿಟಲ್‌ ಅಂಗನವಾಡಿ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ನಮ್ಮೂರಿನಲ್ಲೇಕೆ ಆರಂಭಿಸಬಾರದು ಎಂದು ಚಿಂತಿಸುತ್ತಿದ್ದೆ. ಅದಕ್ಕೆ ಎಲ್ಲರೂ ಸಹಕಾರ ನೀಡಿದ್ದರಿಂದ ಸಾಕಾರಗೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.