ADVERTISEMENT

ಜನರ ಆಶೋತ್ತರಗಳಿಗೆ ಸ್ಪಂದನೆ: ಎಚ್.ಕೆ.

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 5:27 IST
Last Updated 4 ಜುಲೈ 2013, 5:27 IST

ಬಳ್ಳಾರಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲು ರಚಿತವಾಗಿರುವ ಸಚಿವ ಸಂಪುಟದ ಉಪಸಮಿತಿಗೆ ಸಾರ್ವ ಜನಿಕರ ಹಾಗೂ ತಜ್ಞರ ಅನೇಕ ಸಲಹೆ, ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವರದಿ ಸಿದ್ಧಪಡಿಸಲಾಗು ವುದು ಎಂದು ಉಪಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ತಿಳಿಸಿದರು.

ಜಿಲ್ಲೆಯ ಹೊಸಪೇಟೆಯಲ್ಲಿ ಬುಧವಾರ ಉಪಸಮಿತಿ ಏರ್ಪಡಿಸಿದ್ದ ಸಾರ್ವಜನಿಕರ ಸಮಾಲೋಚನಾ ಸಭೆಯ ನಂತರ ಅವರು ಸುದ್ದಿಗಾರರೊಗೆ ಈ ವಿಷಯ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕೇಂದ್ರ ಸರ್ಕಾರ ಸೂಕ್ತ ರೀತಿಯ ನೆರವು ನೀಡುತ್ತಿದೆ. ಸಂವಿಧಾ ನದ 371ನೇ `ಜೆ' ಕಲಮಿಗೆ ತಿದ್ದುಪಡಿ ತರುವ ಮೂಲಕ ಹೈದರಾಬಾದ್ ಕರ್ನಾಟಕದ ಯುವ ಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಲ್ಲದೆ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸಮಿತಿಯು ಅಭಿಪ್ರಾಯ ಸಂಗ್ರಹಿಸಿ  ಇದೇ 11ರೊ ಳಗೆ ಮುಖ್ಯ ಮಂತ್ರಿಯವರಿಗೆ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದರು.

ಸಾರ್ವಜನಿಕರೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅನೇಕ ಉತ್ತಮ ಸಲಹೆಗಳು ಸಲ್ಲಿಕೆಯಾಗಿವೆ. ಸಮಿತಿಯು ಅವುಗಳನ್ನು ಗಂಭೀರವಾಗಿ ಪರಿಗಣಿಸಲಿದೆ. ಒಟ್ಟಾರೆ, ಈ ಭಾಗದ ಜನರಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಾ ಗುವುದು ಎಂದು ಅವರು ಭರವಸೆ ನೀಡಿದರು.

ಸಂವಿಧಾನದ ಅನ್ವಯ ಈ ಭಾಗದ ಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 100ರಷ್ಟು ಮೀಸಲಾತಿ ಕಲ್ಪಿಸು ವುದಕ್ಕೆ ಅವಕಾಶವಿದೆ. ಆದರೆ, ರಾಜ್ಯದ ಇತರ ಭಾಗಗಳಲ್ಲೂ ಲಭ್ಯವಿರುವ ಉದ್ಯೋಗಾವಕಾಶದಲ್ಲಿ ಮತ್ತು ಶಿಕ್ಷಣದಲ್ಲಿ ಸೂಕ್ತ ರೀತಿಯ ಮೀಸಲಾತಿ ದೊರಕಿಸುವ ಬಗ್ಗೆಯೂ ಸಮಿತಿ ನಿರ್ಧ ರಿಸಲಿದೆ. ಇದುವರೆಗೂ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆಯೇ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಆಂಧ್ರದ ತೆಲಂಗಾಣ ಮತ್ತು ಮಹಾ ರಾಷ್ಟ್ರದ ವಿದರ್ಭ ಪ್ರದೇಶ ಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾ ಗಿದ್ದರೂ ಅಲ್ಲಿ ಈ ಮಾದರಿಯು ಅಷ್ಟಾಗಿ ಯಶಸ್ವಿಯಾಗಿಲ್ಲ ಎಂಬ ಕೂಗು ಕೇಳಿಬಂದಿದೆ. ಈ ಕಾರಣ ದಿಂದಲೇ ಆಂಧ್ರದ ಸರ್ಕಾರ ಜೈನ್ ಸಮಿತಿ ರಚಿಸಿ ತರಿಸಿಕೊಂಡಿರುವ ವರದಿ ಯನ್ನು ಉಪಸಮಿತಿಯು ಅಭ್ಯಸಿಸಲಿದೆ ಎಂದು ಪಾಟೀಲ ವಿವರಿಸಿದರು.

ಜನರ ಸಲಹೆ, ಸೂಚನೆಗಳನ್ನು ಪರಿಗಣಿಸಿ ಸೂಕ್ತ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಿರುವ ಸಮಿತಿಯ ಶಿಫಾರಸುಗಳು ರಾಜ್ಯದ ಇತರ ಭಾಗದ ಅಗತ್ಯವನ್ನೂ ಗಮನದಲ್ಲಿ ಇರಿಸಿಕೊಳ್ಳ ಲಿದೆ ಎಂದು ಅವರು ಹೇಳಿದರು.

ಉಪ ಸಮಿತಿಯ ಮೂಲಕ ಈ ಪ್ರದೇಶದ ಜನರ ಅಗತ್ಯಗಳ ಪೂರೈ ಕೆಯ ಸೇವೆ ಸಲ್ಲಿಸುವ ಉತ್ತಮ ಅವಕಾಶ ಎಲ್ಲ ಸದಸ್ಯರಿಗೂ ಲಭಿಸಿದೆ. ಈ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ಸ್ಥಾಪಿಸುವ ಮೂಲಕ ಹಿಂದು ಳಿದ ಹೈದರಾಬಾದ್ ಕರ್ನಾಟಕದ ಸಮಗ್ರ ಬೆಳವಣಿಗೆಗೆ ಸರ್ಕಾರ ಅಗತ್ಯ ಹಣ ಕಾಸಿನ ನೆರವನ್ನೂ ನೀಡಲಿದೆ ಎಂದರು. ಸಮಿತಿ ಸದಸ್ಯರೂ ಆಗಿರುವ ಸಚಿವೆ ಉಮಾಶ್ರೀ, ಟಿ.ಬಿ. ಜಯಚಂದ್ರ, ಪಿ.ಟಿ. ಪರಮೇಶ್ವರ ನಾಯ್ಕ, ಖಮ ರುಲ್ ಇಸ್ಲಾಂ, ಶಿವರಾಜ್ ತಂಗಡಗಿ ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.