ADVERTISEMENT

`ಜನಸಂಖ್ಯಾ ನಿಯಂತ್ರಣ ಜಾಗೃತಿ ಅಗತ್ಯ'

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 4:00 IST
Last Updated 15 ಜುಲೈ 2013, 4:00 IST

ಬಳ್ಳಾರಿ: ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ತಡೆಗಟ್ಟದಿದ್ದರೆ ಭವಿಷ್ಯದಲ್ಲಿ ಬದುಕಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗುವ ಆತಂಕವಿದೆ ಎಂದು ತಾಲ್ಲೂಕಿನ ವೈದ್ಯಾಧಿಕಾರಿ ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ  ತಾಲ್ಲೂಕಿನ ಚೇಳ್ಳಗುರ್ಕಿ ಎರಿತಾತ ಮಠದ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯ ದಿನಾಚರಣೆ, ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.

ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ಮರ ಬೆಳೆಸಿ ಪರಿಸರವನ್ನು ಶುಚಿಯಾಗಿಟ್ಟುಕೊಂಡರೆ ಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಗ್ರಾಮದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೆ. ಪ್ರಹ್ಲಾದ್ ಸಲಹೆ ನೀಡಿದರು.

ವಸತಿ ನಿಲಯದ ಸುತ್ತಲೂ ಇರುವ ಪ್ರದೇಶದಲ್ಲಿ ಇದೇ ಸಂದರ್ಭದಲ್ಲಿ ಸಸಿ ನೆಡಲಾಯಿತು. ಸರ್ಕಾರಿ ಶಾಲೆಯ ಮುಖ್ಯಾಧ್ಯಾಪಕ ನಾಗಪ್ಪ, ಶಿಕ್ಷಕ ನಾಗರಾಜ್ ಹನುಮಂತ, ಸುರೇಶ, ಎಸ್. ಎರಿಸ್ವಾಮಿ, ಡಿ. ನಾರಾಯಣಪ್ಪ, ಮಂಜುನಾಥ, ಸೋಮಶೇಖರ್, ಆರೋಗ್ಯ ಸಹಾಯಕಿ ಚೆನ್ನಮ್ಮ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳಗುರ್ಕಿ ಸ್ವಾಗತಿಸಿದರು. ಎಸ್. ರಾಜು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.