ADVERTISEMENT

ಜೀವ ಸೆಳೆದ ಜಾಲಿ ರೈಡ್‌...!

ಕೋಳೂರು ಕ್ರಾಸ್‌ ಅಪಘಾತ; ಮೃತಪಟ್ಟವರ ಕುಟುಂಬದಲ್ಲಿ ಶೋಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:53 IST
Last Updated 17 ಜೂನ್ 2018, 11:53 IST

ಕುರುಗೋಡು: ‘ಮನ್ಯಾಗ ಮಕ್ಕಂಡ ಮಗನ್ನ ಕರಕೊಂಡು ಹೋಗಿ ಹೆಣ ಮಾಡಿ ಕರಕೊಂಡು ಬಂದ್ರೆಲ್ಲೋ. ಇರೋ ಒಬ್ಬ ಮಗನ್ನ ಕಳಕೊಂಡು ದಿಕ್ಕಿಲ್ಲದಂಗಾದೆಲ್ಲೋ ಯಪ್ಪಾ’ ಶುಕ್ರವಾರ ಕೋಳೂರು ಕ್ರಾಸ್‌ನಲ್ಲಿ ನಡೆದ ಬಸ್‌–ಕಾರು ಡಿಕ್ಕಿ ಅಪಘಾತದಲ್ಲಿ ಮೃತಪಟ್ಟ ಎಚ್.ಎಂ. ವಿನಯ್ ತಾಯಿ ಈರಮ್ಮ ಶನಿವಾರ ಹೀಗೆ ರೋದಿಸುತ್ತಿದ್ದರು. ಏಕೆಂದರೆ ವಿನಯ್‌ ಸ್ನೇಹಿತರೊಂದಿಗೆ ಕಾರಿನಲ್ಲಿ ಜಾಲಿ ರೈಡ್‌ ಹೋಗಿಯೇ ಜೀವ ಕಳೆದುಕೊಂಡಿದ್ದರು.

ಎಂಟು ವರ್ಷದ ಹಿಂದೆ ತಂದೆ ಮೃತಪಟ್ಟ ಬಳಿಕ ವಿನಯ್‌ ತಾಯಿಗೆ ಆಸರೆಯಾಗಿದ್ದರು. ಈಗ ಆ ತಾಯಿಗೆ ಯಾರೂ ಆಸರೆ ಇಲ್ಲದಂತಾಗಿದೆ.

ಕಾಣೆಯಾದ ‘ಸಂತೋಷ’:

ADVERTISEMENT

‘ಕಾರಿನಲ್ಲಿ ಒಂದು ರೌಂಡ್ ಹಾಕಿಸಿಕೊಂಡು ಬರುತ್ತೇನೆ’ ಎಂದು ಪತ್ನಿಗೆ ಹೇಳಿ ಮಗ ಪ್ರೀತಮ್ ಮತ್ತು ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗಿ ಮೃತಪಟ್ಟ ಆರ್.ಎಂ.ಸಂತೋಷ್ ಮನೆಯಲ್ಲಿ ಸಂತೋಷ ಕಾಣೆಯಾಗಿದೆ. ಅವರು ಪಟ್ಟಣದ ತಮ್ಮ ಗೆಳೆಯ ವೀರೇಶ್‌ ಅವರಿಂದ ಕಾರನ್ನು ಪಡೆದುಕೊಂಡಿದ್ದರು.

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಸಂತೋಷ್, ಕಾಶಿಯಲ್ಲಿ ಶಿಕ್ಷಣ ಪಡೆದ ಬಳಿಕ 2009ರಲ್ಲಿ ಸ್ಥಳೀಯ ಹಾವಿಗೆ ಮಠಕ್ಕೆ ಪೀಠಾಧಿಪತಿಯಾಗಿದ್ದರು. ಒಂದೇ ವರ್ಷದೊಳಗೆ ಪೀಠ ತ್ಯಜಿಸಿದ ಅವರು ಗೃಹಸ್ಥಾಶ್ರಮ ಪ್ರವೇಶಿಸಿದ್ದರು.

ಮೃತಪಟ್ಟ ಅವರ ಮಗ ಪ್ರೀತಂ ಜೊತೆಗೆ ಒಂದು ಹೆಣ್ಣು ಮಗುವಿದೆ. ಕಳೆದ ಐದು ವರ್ಷದ ಹಿಂದೆ ಅಣ್ಣ ಮೃತಪಟ್ಟಿದ್ದರಿಂದ ತಾಯಿ, ಹೆಂಡತಿ, ಮಕ್ಕಳ ಜವಾಬ್ದಾರಿಯೊಂದಿಗೆ ಅತ್ತಿಗೆಯ ಜವಾಬ್ದಾರಿಯೂ ಸಂತೋಷ್‌ ಅವರ ಮೇಲೆ ಇತ್ತು.

ದಾದ, ಗುರುಮೂರ್ತಿ ಕುಟುಂಬದ ಸ್ಥಿತಿಯೂ ಇದೇ

ಅಪಘಾತದಲ್ಲಿ ಮೃತಪಟ್ಟ ದಾದಾ ಕಲಂದರ್ ಮತ್ತು ಟ್ಯಾಕ್ಸಿ ಚಾಲಕ ಗುರುಮೂರ್ತಿ ಕುಟುಂಬದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮೂರು ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಕಲಂದರ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೋಟೆಲ್ ಮಾಲಿಕರಿಂದ ಹಣ ಪಡೆದು ಬಳ್ಳಾರಿಗೆ ಹೋಗುವುದಾಗಿ ಹೇಳಿ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋದ ಅವರು ತಾಯಿಯನ್ನು ಅನಾಥೆಯನ್ನಾಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.