ADVERTISEMENT

ಟೊಮೆಟೊ ಬೆಲೆ ಕುಸಿತ: ರೈತ ಕಂಗಾಲು

ಹೆದ್ದಾರಿ ಪಕ್ಕ 4 ಟನ್‌ಗಳಷ್ಟು ಹಣ್ಣು ಚೆಲ್ಲಿದ ಅನ್ನದಾತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:25 IST
Last Updated 30 ಮಾರ್ಚ್ 2018, 6:25 IST
ಟೊಮೆಟೊ ದರ ಕುಸಿತದಿಂದ ಕಂಗಾಲಾದ ರೈತ ಸಣ್ಣ ರಾಮುಡು ಕಂಪ್ಲಿ ಹೆದ್ದಾರಿ–29ರ ಪಕ್ಕದಲ್ಲಿ ನಾಲ್ಕು ಟನ್ ಸುರಿದಿರುವ ದೃಶ್ಯ
ಟೊಮೆಟೊ ದರ ಕುಸಿತದಿಂದ ಕಂಗಾಲಾದ ರೈತ ಸಣ್ಣ ರಾಮುಡು ಕಂಪ್ಲಿ ಹೆದ್ದಾರಿ–29ರ ಪಕ್ಕದಲ್ಲಿ ನಾಲ್ಕು ಟನ್ ಸುರಿದಿರುವ ದೃಶ್ಯ   

ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಕ್ರಾಸ್‌ ಬಳಿ ರೈತರೊಬ್ಬರು ಕೊಳವೆಬಾವಿ ಆಧಾರಿತ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಒಂದೂವರೆ ಎಕರೆಯಲ್ಲಿ ಟೊಮೆಟೊ ಅನ್ನು ಸಮೃದ್ಧವಾಗಿ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಏಕಾಏಕಿ ಧಾರಣೆ ಕುಸಿದಿದ್ದರಿಂದ ಕಂಗಾಲಾಗಿ ಹೊಲದ ಪಕ್ಕದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ–29ರ ಬದಿ ಗುರುವಾರ ನಾಲ್ಕು ಟನ್‌ಗಳಷ್ಟು ಟೊಮೆಟೊ ಸುರಿದರು. ಈ ದೃಶ್ಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಮನಕಲಕಿತು.

ಈ ಕುರಿತುಮಾತನಾಡಿದ ರೈತ ಸಣ್ಣ ರಾಮುಡು, ‘ಒಂದೂವರೆ ಎಕರೆಯಲ್ಲಿ ಈ ಬಾರಿ ಸಾಗರ ತಳಿ ಟೊಮೆಟೊ ನಾಟಿ ಮಾಡಿದ್ದು, ಎಕರೆಗೆ ₹ 35 ಸಾವಿರ ವೆಚ್ಚವಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಪ್ರತ್ಯೇಕ ₹55 ಸಾವಿರ ಖರ್ಚು ಮಾಡಿದ್ದೇನೆ’ ಎಂದರು. ‘ಒಂದು ಬಾಕ್ಸ್‌ನಲ್ಲಿ 25 ಕೆ.ಜಿಯಂತೆ ಟೊಮೆಟೊ ಸಂಗ್ರಹ ಮಾಡಿ 15 ಕಿ.ಮೀ ದೂರದ ಗಂಗಾವತಿ ಮಾರುಕಟ್ಟೆಯಲ್ಲಿ ಸಗಟು ಮಾರಾಟ ಮಾಡಿದಲ್ಲಿ ₹60ಗೆ ಕೊಳ್ಳುತ್ತಾರೆ. ಇದರಲ್ಲಿ ₹10 ಹಮಾಲಿ, ₹10 ಕಮಿಷನ್‌, ₹10 ಸಾಗಣೆ ವೆಚ್ಚ, ₹20 ಒಂದು ಬಾಕ್ಸ್‌ ಟೊಮೆಟೊ ಬಿಡಿಸಿದ ಕೂಲಿ. ಇನ್ನು ಮಾರುಕಟ್ಟೆಯಲ್ಲಿ ಪ್ರತಿ ಬಾಕ್ಸ್‌ಗೆ ಮಿಕ್ಕಿದ್ದು ₹10 ಮಾತ್ರ. ಈ ₹10 ಪಡೆಯಲು ಇಡೀ ದಿನ ಶ್ರಮಿಸಬೇಕು. ಹೀಗಾಗಿ ರಸ್ತೆ ಪಕ್ಕಕ್ಕೆ ಚೆಲ್ಲಿದೆ’ ಎಂದು ನೊಂದು ನುಡಿದರು.

**

ADVERTISEMENT

ಸದ್ಯ ಮಾರುಕಟ್ಟೆಯಲ್ಲಿ ₹10ಕ್ಕೆ ಕೆ.ಜಿ ಟೊಮೆಟೊ ಮಾರಾಟವಾಗುತ್ತಿದೆ. ಆದರೆ ರೈತರಿಂದ ಕೊಳ್ಳುವಾಗ ಅತಿ ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ –ದೊಡ್ಡ ರಾಮುಡು, ಸಣ್ಣ ರಾಮುಡು, ತೋಟಗಾರಿಕೆ ಬೆಳೆಗಾರರು 

**

ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.