ADVERTISEMENT

‘ಠುಸ್ಸೆಂದ ಆದಾಯದ ಪಟಾಕಿ...’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 5:34 IST
Last Updated 21 ಅಕ್ಟೋಬರ್ 2017, 5:34 IST
ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ರಸ್ತೆಯಲ್ಲಿ ಶುಕ್ರವಾರ ಕಸದ ರಾಶಿ ಕಂಡುಬಂತು
ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ರಸ್ತೆಯಲ್ಲಿ ಶುಕ್ರವಾರ ಕಸದ ರಾಶಿ ಕಂಡುಬಂತು   

ಬಳ್ಳಾರಿ: ‘ಈ ಬಾರಿಯ ದೀಪಾವಳಿಯಲ್ಲಿ ನಮ್ಮ ಆದಾಯದ ಪಟಾಕಿ ಟುಸ್ಸೆಂದಿದೆ....’ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಲಿಪಾಡ್ಯಮಿಯ ದಿನವಾದ ಶುಕ್ರವಾರ ವರ್ತಕ ಇಬ್ರಾಹಿಂ ಹೀಗೆ ನಿರಾಶೆ ವ್ಯಕ್ತಪಡಿಸಿದರು.

ಅವರದ್ದೂ ಸೇರಿದಂತೆ ಅಲ್ಲಿರುವ 23 ಪಟಾಕಿ ಮಳಿಗೆಗಳ ಪೈಕಿ ಬಹುತೇಕ ಕಡೆ ಹೆಚ್ಚು ಗ್ರಾಹಕರು ಕಂಡುಬರಲಿಲ್ಲ. ನಗರದಲ್ಲಿ ಗುರುವಾರ ರಾತ್ರಿಯೂ ಪಟಾಕಿಗಳ ಅಬ್ಬರ ಹಿಂದಿನ ವರ್ಷದಂತೆ ಇರಲಿಲ್ಲ.

‘ಜಿಎಸ್‌ಟಿಯಿಂದಾಗಿ ಪಟಾಕಿಗಳ ಬೆಲೆ ಹೆಚ್ಚಾಗಿರುವುದು ಮತ್ತು ಜನರಿಗೆ ಮಾಹಿತಿ ನೀಡದೆ ಪಟಾಕಿ ಮಳಿಗೆಗಳನ್ನು ಮುನ್ಸಿಪಲ್‌ ಕಾಲೇಜು ಮೈದಾನದಿಂದ ಜಿಲ್ಲಾ ಕ್ರೀಡಾಂಗಣ ಹೊರ ಆವರಣಕ್ಕೆ ಸ್ಥಳಾಂತರಿಸುವುದು ಈ ಬಾರಿಯ ವಹಿವಾಟಿಗೆ ದೊಡ್ಡ ಪೆಟ್ಟು ನೀಡಿದೆ’ ಎಂದು  ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ADVERTISEMENT

‘ಅ. 16ರಿಂದಲೇ ಮಳಿಗೆಗಳನ್ನು ಸ್ಥಾಪಿಸಿದರೂ. ನಮಗೆ ಎರಡು ದಿನ ಕಾಲ ವಹಿವಾಟು ನಡೆಯಲೇ ಇಲ್ಲ. ಮಳಿಗೆಗಳು ಸ್ಥಳಾಂತರವಾದ ಕುರಿತು ಜನರಿಗೆ ಮಾಹಿತಿ ಇರದಿದ್ದುದೇ ಅದಕ್ಕೆ ಕಾರಣ’ ಎಂದು ವಿಷಾದಿಸಿದರು.

‘ಪಟಾಕಿಗಳ ಮೇಲೆ ಶೇ 14.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ಶೇ 28ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ ಬೆಲೆಯೂ ಹೆಚ್ಚಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಟಾಕಿಗಳ ದರದಲ್ಲಿ ಶೇ 5ರಿಂದ 10ರಷ್ಟು ಹೆಚ್ಚಳವಾಗಿದೆ. ಗಿಫ್ಟ್ ಪ್ಯಾಕೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ₹500ರಿಂದ 1000 ದವರೆಗೆ ಪ್ಯಾಕೆಟ್‌ಗಳ ದರ ನಿಗದಿ ಮಾಡಲಾಗಿದೆ’ ಎಂದರು.

ಗರಿಷ್ಠ ಮಾರಾಟ ದರಕ್ಕಿಂತ ಕಡಿಮೆ: ಇಂಥ ಸನ್ನಿವೇಶದಲ್ಲೂ, ವರ್ತಕರು, ಪಟಾಕಿ ಪೊಟ್ಟಣಗಳ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ದರಕ್ಕಿಂತ ಅತಿ ಕಡಿಮೆ ದರದಲ್ಲಿ ಪಟಾಕಿಗಳನ್ನು ಮಾರುತ್ತಿದ್ದರು.

ಪಟಾಕಿ ಗಿಫ್ಟ್‌ ಬಾಕ್ಸ್‌ ಒಂದರ ಮೇಲೆ ಮಾರಾಟ ದರ ₹1000ಕ್ಕೂ ಹೆಚ್ಚು ಇದ್ದರೂ, ಅದನ್ನು ಕನಿಷ್ಠ ₹500ಕ್ಕೆ ಮಾರಾಟ ಮಾಡುತ್ತಿದ್ದರು. ‘ಇದು ಹೇಗೆ ಸಾಧ್ಯ?’ ಎಂದು ಕೇಳಿದರೆ "ಹೇಳಲು ಸಾಧ್ಯವಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.