ADVERTISEMENT

ತರಸಾಲಪ್ಪ-ಈರನಾಗಪ್ಪ ದೇವರ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 8:45 IST
Last Updated 28 ಅಕ್ಟೋಬರ್ 2011, 8:45 IST

ಸಿರುಗುಪ್ಪ: ಕುರುಬ ಸಮಾಜದ ಆರಾಧ್ಯ ದೈವ ತರಸಾಲಪ್ಪ- ಈರನಾಗಪ್ಪ ದೇವರ ಪಲ್ಲಕ್ಕಿ ಉತ್ಸವವು ಬಾಗವಾಡಿ ಗ್ರಾಮದಲ್ಲಿ ಗುರುವಾರ ಶ್ರದ್ದಾಭಕ್ತಿಯಿಂದ ಜರುಗಿತು.

ದೀಪಾವಳಿ ಬಲಿಪಾಡ್ಯದಂದು ಗ್ರಾಮದ ಬಹುಸಂಖ್ಯೆ ಉಳ್ಳ ಕುರುಬ ಬಾಂಧವರು, ಈ ಎರಡೂ ದೇವರುಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಸ್ಥಾನದಿಂದ ಬೆಳಗಿನ ಜಾವ ಸುಮಂಗಲೆಯರು ಕಳಸ, ಡೊಳ್ಳು ವಾದ್ಯಗಳೊಂದಿಗೆ ಛತ್ರ ಚಾಮರ ಹಿಡಿದು ಮೈಲಾರಲಿಂಗ ಭಕ್ತಿಗೀತೆಗಳನ್ನು ಹಾಡುತ್ತಾ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದರೊಂದಿಗೆ ಗ್ರಾಮದ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಪಕ್ಕದ ತುಂಗಭದ್ರಾ ನದಿಗೆ ತೆರಳಿದರು.

ನಂತರ ಎರಡೂ ದೇವರುಗಳನ್ನು ನದಿಯಲ್ಲಿ ಗಂಗಾಸ್ನಾನಗೈದು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ಅಲ್ಲಿಯೇ ಗದ್ದುಗೆ ಸ್ಥಾಪಿಸಿದರು. ಇಡೀ ದಿನ ಸ್ವಾಮಿಗೆ ವಿಶೇಷ ಪೂಜೆ ನಡೆಸಿದ ಭಕ್ತರು ಕಾಯಿ-ಕರ್ಪೂರ ಮತ್ತು ತಮ್ಮ ಮನೆಗಳಲ್ಲಿ ಮಾಡಿದ ಹೋಳಿಗೆ ನೈವೇದ್ಯಗಳನ್ನು ಸಮರ್ಪಿಸಿ ದರ್ಶನ ಪಡೆದು ಪುನೀತರಾದರು.
ಗದ್ದುಗೆಯ ಪಕ್ಕದಲ್ಲಿ ಬಣ್ಣ ಬಣ್ಣದ ಛತ್ರ ಚಾಮರಗಳಿಂದ ಅಲಂಕರಿಸಲಾಗಿತ್ತು. ಡೊಳ್ಳುಗಳನ್ನು ಬಾರಿಸುವ ಯುವಕರ ತಂಡ ವಿವಿಧ ಭಂಗಿಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಚಮತ್ಕಾರಗಳನ್ನು ಪ್ರದರ್ಶಿಸಿದರು.

ಗೊರವಯ್ಯನವರ ತಂಡ ಈ ದೇವರುಗಳ ಮಹಿಮೆಯನ್ನು ಕೊಂಡಾಡುತ್ತಾ ಉತ್ಸವದಲ್ಲಿದ್ದ ಭಕ್ತರಿಗೆ ಭಂಡಾರ ಹಚ್ಚಿ ಡೊಳ್ಳಿನ ವಾದ್ಯಕ್ಕೆ ಸಾಥ್ ನೀಡಿದರು. ಸಂಜೆ ನದಿಯಿಂದ ದೇವರ ಪಲ್ಲಕ್ಕಿಯನ್ನು ಹೊತ್ತು ಗ್ರಾಮದ ಬೀದಿಯಲ್ಲಿ ಹೊರಟು ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿ ಹಣ್ಣು ಕಾಯಿ ಸಮರ್ಪಿಸಿ ಮೂಲ ದೇವಸ್ಥಾನಕ್ಕೆ ಬಂದು ಅನೇಕ ವಿಧಿ ವಿಧಾನಗಳೊಂದಿಗೆ ಮೆರವಣಿಗೆ ಮುಕ್ತಾಯಗೊಳಿಸಿದರು. ಇಡೀ ದಿನ ಗ್ರಾಮದಲ್ಲಿ ಡೊಳ್ಳಿನ ಶಬ್ಧದ ನಾದ ವಿಜೃಂಭಿಸಿತ್ತು .

ಅರ್ಚಕ ಪೂಜಾರಿ ದ್ಯಾವಣ್ಣ ಮಹಾಮಂಗಳಾರತಿ ನೆರವೇರಿಸಿ ಸೇರಿದ ಭಕ್ತರಿಗೆಲ್ಲಾ ಕಂಕಣ ಕಟ್ಟಿ ಬಂಢಾರ ನೀಡಿ ಹರಸಿದರು.ಈ ಮನೆ ದೇವರ ಭಕ್ತರು ಇಂದು ಜಿಲ್ಲೆಯ ನಾನಾ ಕಡೆಯಿಂದ ಬಂದು ತಮ್ಮ ಹರಕೆಯನ್ನು ಅರ್ಪಿಸಿ ಸ್ವಾಮಿಯ ದರ್ಶನ ಪಡೆದರು.

ಈ ಉತ್ಸವದಲ್ಲಿ ಆದಿಮನೆ ಮೂಕಪ್ಪ, ಹೊಸಮನೆ ತರಸಾಲಪ್ಪ, ನಾಗಯ್ಯ, ಹಲೆಗದೆ ಶಿವಣ್ಣ, ಹೊಸಮನೆ ಯಲ್ಲಪ್ಪ, ಕತ್ತೇರು ಹನುಮಂತಪ್ಪ, ಬೀರಲಿಂಗಪ್ಪ, ದೊಡ್ಡಮನೆ ಗಾದಿಲಿಂಗಪ್ಪ ಉಲ್ತಿ ಮಹಾದೇವ, ಹಲೆಗದ ಅಮರೇಶ್, ಡಿ.ಕೆ. ನಾಗರಾಜ್ ನೇತೃತ್ವ ವಹಿಸಿದ್ದರು. ಮುಂತಾದ ಸಮಾಜದ ಗಣ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.