ADVERTISEMENT

ತಾಲ್ಲೂಕಿನ ವಿವಿದೆಡೆ ಆಲಿಕಲ್ಲು ಮಳೆ ಭತ್ತದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:32 IST
Last Updated 4 ಏಪ್ರಿಲ್ 2018, 10:32 IST

ಸಿರುಗುಪ್ಪ: ತಾಲ್ಲೂಕಿನ ವಿವಿದಡೆ ಸೋಮವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ರೈತರು ಬೆಳೆದ ಭತ್ತದ ಫಸಲು ಹಾನಿಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.ಚಿಕ್ಕಬಳ್ಳಾರಿ ಗ್ರಾಮದಲ್ಲಿ ಅತಿಹೆಚ್ಚು ಆಲಿಕಲ್ಲು ಮಳೆಯಾದ ಪರಿಣಾಮ ಸುಮಾರು 600 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಭತ್ತದ ಕಾಳುಗಳು ನೆಲಕ್ಕೆ ಉದುರಿಬಿದ್ದು ತೀವ್ರ ನಷ್ಟ ಉಂಟಾಗಿದೆ ಎಂದು ಚಿಕ್ಕಬಳ್ಳಾರಿ ಗ್ರಾಮದ ರೈತ ನಾರಾಯಣರೆಡ್ಡಿ ಹೇಳಿದರು.


ಒಂದು ಎಕರೆ ಭತ್ತ ಬೆಳೆಯಲು ರೈತರು ಸುಮಾರು ₨ 25ಸಾವಿರ ವೆಚ್ಚ ಮಾಡಿದ್ದೇವೆ, ಬೆಳೆ ಸಮೃದ್ಧವಾಗಿ ಬೆಳೆದಿದೆ, ಉತ್ತಮ ಇಳುವರಿ ಬರುತ್ತದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಅಕಾಲಿಕ ಮಳೆ ಆಘಾತ ನೀಡಿದೆ, ನಷ್ಟವಾದ ಬೆಳೆ ಸಮೀಕ್ಷೆಯನ್ನು ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ತಹಶೀಲ್ದಾರ್‌ ಪದ್ಮಕುಮಾರಿ ಅವರನ್ನು ಭೇಟಿಯಾದ ರೈತರು ತಮ್ಮ ಬೆಳೆಗೆ ನಷ್ಟ ಪರಿಹಾರವನ್ನು ಕೊಡಿಸುವಂತೆ ಒತ್ತಾಯಿಸಿ ಮಂಗಳವಾರ ಮನವಿ ಸಲ್ಲಿಸಿದರು.ರೈತರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್‌ ಪದ್ಮಕುಮಾರಿ, ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ನಷ್ಟವಾದ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ಪಡೆಯಲಾಗುವುದು ಎಂದು ತಿಳಿಸಿದರು.

ತಾಲ್ಲೂಕಿನ ಹಚ್ಚೊಳ್ಳಿ 6.2 ಮಿ.ಮೀ , ರಾವಿಹಾಳ್ 18.2 ಮಿ.ಮೀ. ಮಳೆಯಾಗಿದೆ, ಟಿ.ರಾಂಪುರ, ತೊಂಡೆಹಾಳ್, ಕುರುವಳ್ಳಿ, ಶ್ರೀಧರಗಡ್ಡೆ, ಬಂಡ್ರಾಳ್ ಕ್ಯಾಂಪ್, ಚಿಕ್ಕಬಳ್ಳಾರಿಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಭತ್ತದ ಬೆಳೆಹಾನಿಗೀಡಾಗಿದೆ ಪರಿಶೀಲಿಸುವುದಾಗಿ ಅವರು ಹೇಳಿದರು.
ನೆಲಕ್ಕುರುಳಿದ ಕಂಬಗಳು: ತಾಲ್ಲೂಕಿನ ಹಚ್ಚೊಳ್ಳಿ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ , ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.