ADVERTISEMENT

`ದುಡಿಯುವ ವರ್ಗದ ವಿರೋಧಿ ಬಜೆಟ್'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:07 IST
Last Updated 18 ಜುಲೈ 2013, 5:07 IST

ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ದುಡಿಯುವ ವರ್ಗದ ಹಿತ ಕಾಪಾಡಿರುವುದಿಲ್ಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಆರೋಪಿಸಿ ಮಂಗಳವಾರ ಸಿಪಿಐ (ಎಂ)ನ ತಾಲ್ಲೂಕು ಸಮಿತಿಯ ಕಾರ್ಯಕರ್ತರು ಜಿಲ್ಲಾ ಸಮಿತಿಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸಮಿತಿಯ ತಾಲ್ಲೂಕು ಕಾರ್ಯ ದರ್ಶಿ ರಂಗಪ್ಪ ದಾಸರ ಮಾತನಾಡಿ, 16,831 ಕೋಟಿ ಕೊರತೆಯ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ಬೆಲೆ ಏರಿಕೆಯನ್ನು ಪ್ರೋತ್ಸಾಹಿಸಿದ್ದಾರೆ. ಜನಸಾಮಾನ್ಯರ ಮೇಲೆ ತೆರಿಗೆಯ ಭಾರವನ್ನು ಹೊರಿ ಸುವ ಹುನ್ನಾರವೂ ಅಡಗಿದೆ ಎಂದು ಕಿಡಿ ಕಾರಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ಕೂಲಿ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಕಾರ್ಮಿಕ ಕಲ್ಯಾಣಕ್ಕಾಗಿ ಇರುವ ನಿಧಿಯನ್ನು ರೂ.456 ಕೋಟಿಯಿಂದ ರೂ.392 ಕೋಟಿಗೆ ಇಳಿಸುವ ಮೂಲಕ ಸಿದ್ದರಾಮಯ್ಯ ಕಾರ್ಮಿಕರ ಹಿತಾಸಕ್ತಿಯನ್ನು ಗಾಳಿಗೆ ತೂರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿ ಸಿದರು.

ನಂತರ ತಹಸೀಲ್ದಾರ್ ನಾಗರಾಜ ಭಟ್ ಮೂಲಕ ಮುಖ್ಯಮಂತ್ರಿ ಸಿದ್ದ ರಾಮಯ್ಯನವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಜಿಲ್ಲಾ ಮುಖಂಡ ರಾದ ಎಸ್.ಜಗನ್ನಾಥ್, ಬಿ. ಮಾಳಮ್ಮ, ಎಚ್.ಉಸ್ಮಾನ್ ಭಾಷಾ, ಸಿ.ಹನಮಂತ, ಬೆಂಗಳೂರು ವೀರೇಶ್, ಕಮ್ಮಾರ್ ಬಸವರಾಜ್, ಓ.ತಿಂದಪ್ಪ, ಹೊಸಪೇಟೆ ಮಂಜುಳ, ಹುಲಿಗೆಮ್ಮ, ಕೆ.ರಾಮಪ್ಪ ಹಾಗೂ ಜಿ.ರಮೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.