ADVERTISEMENT

ದೇವಸ್ಥಾನ ತೆರವಿಗೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 5:20 IST
Last Updated 6 ಏಪ್ರಿಲ್ 2013, 5:20 IST

ಬಳ್ಳಾರಿ: ನಗರದ 19ನೇ ವಾರ್ಡ್ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದಲ್ಲಿನ ಮುತ್ತುಮಾರೆಮ್ಮ ದೇವಸ್ಥಾನದ ತೆರವು ಕಾರ್ಯವನ್ನು ವಿರೋಧಿಸಿ ನೂರಾರು ಜನ ಭಕ್ತರು ಶುಕ್ರವಾರ ಧರಣಿ ನಡೆಸಿದರು.

ಬೆಳಗ್ಗೆ 9ಕ್ಕೆ ಮಹಿಳೆಯರು ಸೇರಿದಂತೆ ನೂರಾರು ಜನ ಭಕ್ತರು ಧರಣಿ  ನಡೆಸಿ, ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.

ಪುರಾತನ ದೇಗುಲದ ಮಹತ್ವ ಅರಿಯದೆ ಪಾಲಿಕೆ ಆಡಳಿತವು ದಿಢೀರ್ ತೆರವುಗೊಳಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ದೇವಸ್ಥಾನದ ಸಮರ್ಪಕ ದಾಖಲೆಗಳು ಇದ್ದರೂ ತೆರವು ಮಾಡುವುದು ಸರಿಯಲ್ಲ ಎಂದು ಧರಣಿ ನಿರತರು ಕಿಡಿಕಾರಿದರು.

ಒಂದು ವೇಳೆ ದೇವಸ್ಥಾನ ತೆರವುಗೊಳಿಸಲು ಮುಂದಾದಲಿ ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ವರ್ಗದ ಜನರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡರಾದ ನರೇಶ್, ರಾಮು, ಯರ‌್ರಿಸ್ವಾಮಿ, ಕೃಷ್ಣವೇಣಿ, ನಾರಾಯಣಮ್ಮ, ಜ್ಯೋತಿ, ಶ್ರೀನಿವಾಸ್ ಎಚ್ಚರಿಸಿದರು.

ಮುತ್ತುಮಾರೆಮ್ಮ ದೇವಸ್ಥಾನ ನೂರಾರು ವರ್ಷಗಳ ಹಿಂದೆ ನಿರ್ಮಾಣವಾಗಿದೆ.  ಹಿಂದೂ ಸಂಪ್ರಾದಯದಂತೆ ದೇವಿಗೆ ನಿತ್ಯ ಪೂಜೆ, ಧಾರ್ಮಿಕ ಸೇವೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಾನ್ಯತೆ ದೊರೆತಿದೆ. ಶಾಸಕರ ಕ್ಷೇತ್ರಾಭಿವೃದ್ಧಿ  ಅನುದಾನದಲ್ಲಿ ಸೌಲಭ್ಯ ದೊರೆತಿದೆ ಎಂದು ದೇವಸ್ಥಾನದ ಅರ್ಚಕ ವಿಜಯ್‌ಕುಮಾರ್ ಹೇಳಿದರು.

ಕಣ್ಣಲ್ಲಿ ನೀರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ನೀಡಿದ ನೋಟಿಸ್ ತಲುಪುತ್ತಿದ್ದಂತೆಯೇ ಮುತ್ತುಮಾರೆಮ್ಮ ಮೂರ್ತಿಯ ಬಲ ಕಣ್ಣಿನಲ್ಲಿ ನೀರು ಹರಿಯುತ್ತಿದೆ ಎಂಬ ವದಂತಿ ಹಬ್ಬಿತು. ದೇವಸ್ಥಾನಕ್ಕೆ ಮಧ್ಯಾಹ್ನದವರೆಗೂ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಹೋಗುತ್ತಿದ್ದು ಕಂಡಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT