ADVERTISEMENT

ನಿಧಾನದ್ರೋಹಕ್ಕೆ ಬಲಿಯಾದ ಕುಶಲಕರ್ಮಿ ತರಬೇತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:00 IST
Last Updated 16 ಸೆಪ್ಟೆಂಬರ್ 2011, 6:00 IST
ನಿಧಾನದ್ರೋಹಕ್ಕೆ ಬಲಿಯಾದ ಕುಶಲಕರ್ಮಿ ತರಬೇತಿ ಕೇಂದ್ರ
ನಿಧಾನದ್ರೋಹಕ್ಕೆ ಬಲಿಯಾದ ಕುಶಲಕರ್ಮಿ ತರಬೇತಿ ಕೇಂದ್ರ   

ಕೊಟ್ಟೂರು: ಸರ್ಕಾರದ ನಿಧಾನ ದ್ರೋಹ, ಯೋಜನೆ ಮೇಲಿನ ನಿರ್ಲಕ್ಷ್ಯ ಮತ್ತು ಭ್ರಷ್ಟತೆಗೆ ಇಲ್ಲಿನ ಕೈಗಾರಿಕಾ ಕುಶಲ ಕರ್ಮಿ ತರಬೇತಿ ಕೇಂದ್ರ ಕೈಗನ್ನಡಿಯಾಗಿದೆ.ರಾಜ್ಯದ ಮೂರು ಕೈಗಾರಿಕಾ ಕೇಂದ್ರಗಳ ಪೈಕಿ ಒಂದಾಗಿದ್ದ ಇಲ್ಲಿನ ಕೇಂದ್ರ ಇಡೀ ಉತ್ತರ ಕರ್ನಾಟಕದಲ್ಲಿಯೇ ಏಕೈಕ ಕುಶಲಕರ್ಮಿ ತರಬೇತಿ ಕೇಂದ್ರವಾಗಿತ್ತು.

ವಿಶ್ವ ಯೋಜನೆಯಡಿ ಗುಡಿ ಕೈಗಾರಿಕೆಯನ್ನು ಪುನಶ್ಚೇತನ ಗೊಳಿಸುವ ದೃಷ್ಟಿಯಿಂದ ವಿದ್ಯಾವಂತ ನಿರುದ್ಯೋಗಿ ಯುವಕ- ಯುವತಿಯರಿಗೆ ಇಲ್ಲಿ ಬಡಗಿತನ, ಕಮ್ಮಾರಿಕೆ, ಚಮ್ಮಾರಿಕೆ, ವೆಲ್ಡಿಂಗ್, ಟೈಲರಿಂಗ್ ಇನ್ನೂ ಹಲವಾರು ವೃತ್ತಿಗೆ ತರಬೇತಿ ನೀಡಲಾಗುತ್ತಿತ್ತು.

ಒಂದು ವರ್ಷಕ್ಕೆ ಒಂದೊಂದು ವೃತ್ತಿಯಿಂದ (ಕೋರ್ಸ್) 1500ರಿಂದ 2000 ಯುವಕ- ಯುವತಿಯರು ತರಬೇತಿ ಹೊಂದುತ್ತಿದ್ದರು. ತರಬೇತಿ  ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ಆರ್ಥಿಕ ನೆರವು ನೀಡುತ್ತಿತ್ತು.

ಹಿನ್ನೆಲೆ: ಕೊಟ್ಟೂರಿನಲ್ಲಿ ಕೈಗಾರಿಕಾ ಕುಶಲ ಕರ್ಮಿ ತರಬೇತಿ ಕೇಂದ್ರ ಆರಂಭವಾದುದು, ಬ್ರಿಟಿಷರ ಕಾಲದಲ್ಲಿ. ಕಾರಣವಿಷ್ಟೇ ಸ್ವಾತಂತ್ರ್ಯ ಪೂರ್ವದಲ್ಲಿ ಹೊಸಪೇಟೆಯಿಂದ ರೈಲ್ವೆ ಮಾರ್ಗ ಸ್ಥಾಪನೆಯಾದ ಮೇಲೆ ಕೊಟ್ಟೂರಿನಲ್ಲಿ ಹತ್ತಿಗಿರಣಿ, ಸ್ಪಿನ್ನಿಂಗ್ ಮಿಲ್, ಆಯಿಲ್ ಮಿಲ್‌ಗಳು ಹುಟ್ಟಿಕೊಂಡವು.

ಇವುಗಳಲ್ಲಿ ದುಡಿಯಲು ಕುಶಲಕರ್ಮಿಗಳು ಬೇಕಾಗಿದ್ದ ಹಿನ್ನೆಲೆಯಲ್ಲಿ ಬ್ರಿಟಿಷರ ದೂರದೃಷ್ಟಿ ಫಲವಾಗಿ ಈ ಕೈಗಾರಿಕಾ ಕುಶಲಕರ್ಮಿ ತರಬೇತಿ ಕೇಂದ್ರ ಹುಟ್ಟಿಕೊಂಡಿತು.ನಂತರ ಸ್ವಾತಂತ್ರ್ಯ ಪೂರ್ವದಲ್ಲಿ ಕುಂಟುತ್ತಾ ಕೈಗಾರಿಕಾ ಕುಶಲಕರ್ಮಿ ತರಬೇತಿ ಕೇಂದ್ರ ನಡೆಯುತ್ತಾ ಸಾಗಿತ್ತು. ಸ್ವಾತಂತ್ರ ಬಂದ ಮೇಲೆಯೂ ಮುಂದುವರಿಯಿತು.

ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಕೂಡ್ಲಿಗಿಯ ಎನ್.ಎಂ. ನಬಿ ಕೈಗಾರಿಕಾ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಇದಕ್ಕೆ ರೂ. 1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಯಿತು. ತರಬೇತಿ ನೀಡಲು ಬೆಲೆ ಬಾಳುವ ಯಂತ್ರಗಳು ಬಂದವು.

ಇಲ್ಲಿ ತರಬೇತಿ ಹೊಂದಿದ ಯುವಕರು ಸ್ವಯಂ ಉದ್ಯೋಗ ದಲ್ಲಿ ತೊಡಗಿದರು. ಗ್ರಾಮೀಣ ಭಾಗದ ವಿದ್ಯಾವಂತ ಯುವಕರಿಗೆ ಈ ಕೇಂದ್ರ ಆಶಾಕಿರಣವಾಯಿತು. ಯುವಕರು ಉಚಿತವಾಗಿ ಮುಗಿ ಬಿದ್ದು ತರಬೇತಿ ಪಡೆಯತೊಡಗಿದರು.

ಆದರೆ ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಇದ್ದಕ್ಕಿದ್ದಂತೆ ಈ ಕೈಗಾರಿಕಾ ಕುಶಲಕರ್ಮಿ ತರಬೇತಿ ಕೇಂದ್ರವನ್ನು ಮುಚ್ಚಿ ಬಳ್ಳಾರಿಗೆ ವರ್ಗ ಮಾಡಲಾಯಿತು.ಪಟೇಲರ ಕಾಲದಲ್ಲಿ ತರಬೇತಿಗಾಗಿ ಸರ್ಕಾರ ಕಳುಹಿಸಿದ್ದ ದುಬಾರಿಯ ತಂತ್ರಗಳು ತುಕ್ಕು ಹಿಡಿಯತೊಡಗಿವೆ. 8 ಕೊಠಡಿಗಳು, ವರ್ಕ್ ಶೆಡ್‌ಗಳು ಬಾಗಿಲು ಹಾಕಿದ್ದು,  ಅದೊಂದು ಭೂತ ಬಂಗ್ಲೆಯಾಗಿದೆ.

ಸರ್ಕಾರ ಈ ತರಬೇತಿ ಕೇಂದ್ರವನ್ನು ವಶಕ್ಕೆ ತೆಗೆದುಕೊಂಡು ಸರ್ಕಾರಿ ಕಚೇರಿಗೆ ವಹಿಸಿದರೆ ಸುಸಜ್ಜಿತವಾದ ತರಬೇತಿ ಕೇಂದ್ರ ಹಾಳಾಗುವುದನ್ನು ತಪ್ಪಿಸಬಹುದಾಗಿತ್ತು. ಇನ್ನು ಜನಪ್ರತಿನಿಧಿ ಗಳು ಇತ್ತ ತಲೆಹಾಕಿಲ್ಲ.

ಸರ್ಕಾರದ ನಿಧಾನ ದ್ರೋಹದಿಂದಾಗಿ ಸುಮಾರು ಎರಡು ಕೋಟಿಗೂ ಹೆಚ್ಚು ಬೆಲೆ ಬಾಳುವ ತರಬೇತಿ ಕೇಂದ್ರ ಕೊಟ್ಟೂರು ಜನತೆಯೆ ಕಣ್ಣೆದುರಿನಲ್ಲಿಯೇ ದಿನ ದಿನಕ್ಕೂ ಹಾಳಾಗತೊಡಿಗಿದೆ. ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಹೋರಾಟ ಮಾಡುವ ಸಂಘ ಸಂಸ್ಥೆಗಳು ಕಣ್ಣಿದ್ದು ಕುರುಡಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.